ನವದೆಹಲಿ: ಕೊರೊನಾ ವೈರಸ್ನ ಸರಪಳಿ ತುಂಡರಿಸಲು ವಿಧಿಸಲಾಗಿರುವ ಲಾಕ್ಡೌನ್ ಅನ್ನು ಏಕಾಏಕಿ ತೆಗೆದರೆ ಮಾರಕ ಸೋಂಕು ಮತ್ತೆ ಪುನಶ್ಚೇತನಗೊಳ್ಳಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತನ್ನ ಸದಸ್ಯ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದೆ.
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಕೆಲವು ದೇಶಗಳು ಈಗಾಗಲೇ ತಮ್ಮ ಪ್ರಜೆಗಳಿಗೆ ಮನೆಯಲ್ಲಿಯೇ ಇರುವ ನಿರ್ಬಂಧ ವಿಧಿಸಿ, ಅವರನ್ನು ಹೊರಬರದಂತೆ ನೋಡಿಕೊಳ್ಳುತ್ತಿವೆ. ಯಾರಿಗಾದರೂ ನಿರ್ಬಂಧಗಳನ್ನು ತೆಗೆದುಹಾಕುವ ಬಯಕೆ ಇದ್ದರೆ ಒಮ್ಮೆ ಯೋಚಿಸಿ ಎಂದು ಹೇಳಿದ್ದಾರೆ.
ದಿಗ್ಬಂಧವನ್ನು ಬೇಗನೆ ವಾಪಸ್ ತೆಗೆದುಕೊಂಡದ್ದು ಮಾರಕ ಸೋಂಕು ಪುನರುತ್ಥಾನಕ್ಕೆ ಕಾರಣವಾಗಬಹುದು. ನಿರ್ಬಂಧಗಳನ್ನು ಹಂತ- ಹಂತವಾಗಿ ತಂತ್ರಗಾರಿಕೆಯಿಂದ ತೆರವುಗೊಳಿಸಬೇಕು ಎಂದು ಸಲಹೆ ನೀಡಿದ್ದಾರೆ.
ಜಾಗತಿಕವಾಗಿ ಸುಮಾರು 1.5 ಮಿಲಿಯನ್ ಜನರು ಕೋವಿಡ್-19 ಸೋಂಕು ಪೀಡಿತರಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಗಂಭೀರವಾದ ಪರಿಣಾಮ ಎದುರಿಸಿದ ಯುರೋಪಿನ ಸ್ಪೇನ್, ಇಟಲಿ, ಜರ್ಮನಿ ಮತ್ತು ಫ್ರಾನ್ಸ್‌ನಂತಹ ರಾಷ್ಟ್ರಗಳಲ್ಲಿ ಕಳೆದ ವಾರದಲ್ಲಿ ನಿಧಾನಗತಿಯ ಚೇತರಿಕೆ ಕಂಡು ಬಂದಿದೆ. ಇದೇ ಸಮಯದಲ್ಲಿ ಕೆಲವು ರಾಷ್ಟ್ರಗಳಲ್ಲಿ ಆತಂಕಕಾರಿ ವೇಗವರ್ಧನೆಯನ್ನು ನೋಡಿದ್ದೇವೆ ಎಂದರು.
ಆರೋಗ್ಯ ಕಾರ್ಯಕರ್ತರು ವೈರಸ್ ಸೋಂಕಿಗೆ ಒಳಗಾಗುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಟೆಡ್ರೊಸ್, ಪ್ರತಿ ತಿಂಗಳು ಕನಿಷ್ಠ 100 ಮಿಲಿಯನ್ ವೈದ್ಯಕೀಯ ಮುಖಗವಸು ಮತ್ತು ಕೈಗವಸುಗಳನ್ನು ರವಾನಿಸಬೇಕಾಗುತ್ತದೆ. 25 ದಶಲಕ್ಷ ಎನ್-95 ಮಾಸ್ಕ್, ನಿಲುವಂಗಿಗಳು ಮತ್ತು ಮುಖ ಖವಚಗಳು, 2.5 ದಶಲಕ್ಷ ರೋಗನಿರ್ಣಯ ಪರೀಕ್ಷಾ ಕಿಟ್ಗಳು, ಅತ್ಯಧಿಕ ಪ್ರಮಾಣದ ಆಮ್ಲಜನಕ ಸಾಂದ್ರಕಗಳು ಮತ್ತು ಕ್ಲಿನಿಕಲ್ ಆರೈಕೆಯ ಇತರ ಉಪಕರಣಗಳು ಕಳುಹಿಸಬೇಕಿದೆ ಎಂದರು.