ಬರ್ಲಿನ್: ಜರ್ಮನಿಯಲ್ಲಿ 16 ವರ್ಷಗಳ ದೀರ್ಘಾವಧಿ ಆಡಳಿತ ನಡೆಸಿದ ಚಾನ್ಸಲರ್ ಏಂಜೆಲಾ ಮಾರ್ಕೆಲ್ ಅವರ ಉತ್ತರಾಧಿಕಾರಿ ಯಾರಾಗಲಿದ್ದಾರೆ ಅನ್ನೋದನ್ನ ನಿನ್ನೆ(ಸೆಪ್ಟೆಂಬರ್ 26) ನಡೆದ ಸಂಸತ್ ಚುನಾವಣೆ ನಿರ್ಧರಿಸಲಿದೆ.
ಚುನಾವಣೆಯಲ್ಲಿ ಸೆಂಟರ್ - ರೈಟ್ ಯೂನಿಯನ್ ಬಣ ಹಾಗೂ ಸೆಂಟರ್ ಲೆಫ್ಟ್ ಸೋಷಿಯಲ್ ಡೆಮಾಕ್ರಟಿಕ್ ನಡುವೆ ನೆಕ್ ಟು ನೆಕ್ ಫೈಟ್ ಏರ್ಪಟ್ಟಿದೆ. ಪರಿಸರವಾದಿ ಅನ್ನಲೇನಾ ಬೇರ್ಬಾಕ್ ಅವರು ಮೊದಲ ಬಾರಿಗೆ ಚಾನ್ಸಲರ್ ಹುದ್ದೆಗಾಗಿ ಸ್ಪರ್ಧಿಸಿದ್ದು, ಹಿನ್ನಡೆ ಅನುಭವಿಸಿದ್ದಾರೆ.
730 ಸ್ಥಾನಗಳ ಜರ್ಮನಿ ಸಂಸತ್ನಲ್ಲಿ 299 ಕ್ಷೇತ್ರಗಳಿಗೆ ನಡೆದ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಇದರಲ್ಲಿ ಶೇಕಡಾ 25.2 ರಷ್ಟು ಮತ ಪಡೆಯುವ ಮೂಲಕ ಎಸ್‌ಪಿಡಿ ಪಕ್ಷ ಮುನ್ನಡೆ ಸಾಧಿಸಿದೆ. ಮಾರ್ಕೆಲ್ ಪಕ್ಷ ಸಿಡಿಯು ಶೇಕಡಾ 24.1 ರಷ್ಟು ವೋಟ್ಗಳನ್ನು ಪಡೆದಿದೆ. ಪರಿಸರವಾದಿ ಪಕ್ಷ ಶೇಕಡಾ 14.8 ರಷ್ಟು ಮತಗಳನ್ನು ಪಡೆಯುವ ಮೂಲಕ ಹಿನ್ನಡೆ ಅನುಭವಿಸಿದೆ.
ಆದರೆ, ಸಮೀಕ್ಷೆಯೊಂದರ ಪ್ರಕಾರ ಯಾವುದೇ ಪಕ್ಷ ಬಹುಮತ ಪಡೆಯುವುದಿಲ್ಲ ಎಂದು ತಿಳಿದುಬಂದಿದೆ. 1949 ರ ಬಳಿಕ ಇದೇ ಮೊದಲ ಬಾರಿಗೆ ಸಿಡಿಯು ಪಕ್ಷ ಅತಿ ಕಡಿಮೆ ಮತಗಳನ್ನು ಪಡೆದಿದೆ ಎಂದು ವರದಿಯಾಗಿದೆ.
ಜರ್ಮನಿಯ ಚಾನ್ಸಲರ್ ನೇರವಾಗಿ ಚುನಾಯಿತನಾಗುವುದಿಲ್ಲ. ಸರ್ಕಾರ ರಚನೆಯಾದ ನಂತರ ಸಂಸತ್ತಿನ ಕೆಳಮನೆಯಲ್ಲಿ ಮತದಾನದ ಮೂಲಕ ಆಯ್ಕೆಯಾಗುತ್ತಾರೆ. ಉತ್ತರಾಧಿಕಾರಿ ಪ್ರಮಾಣ ವಚನ ಸ್ವೀಕರಿಸುವವರೆಗೂ ಏಂಜೆಲಾ ಮಾರ್ಕೆಲ್ ಅವರೇ ಉಸ್ತುವಾರಿ ಚಾನ್ಸಲರ್ ಆಗಿ ಮುಂದುವರಿಯುತ್ತಾರೆ.
ಇದನ್ನೂ ಓದಿ: ನಾಳೆಯಿಂದ ಭಾರತ-ಕೆನಡಾ ವಿಮಾನ ಸೇವೆ ಪುನಾರಂಭ
ಜರ್ಮನಿಯ ರಕ್ಷಣಾ ಮಂತ್ರಿ, ಸಿಡಿಯುನ ಅನೆಗ್ರೆಟ್ ಕ್ರಾಂಪ್ ಕರೆನ್‌ಬೌರ್, ಸಾರ್ಲ್ಯಾಂಡ್ ಕ್ಷೇತ್ರದಲ್ಲಿ ಸೋತಿದ್ದಾರೆ ಎಂದು ಫ್ರಾಂಕ್‌ಫರ್ಟರ್ ರುಂಡ್‌ಶೌ ಪತ್ರಿಕೆ ವರದಿ ಮಾಡಿದೆ. ಎಕೆಕೆ ಅವರು ಕೇವಲ ಶೇಕಡಾ 25.1 ರಷ್ಟು ಮತಗಳನ್ನು ಪಡೆದಿದ್ದಾರೆ. ಅವರ ಎಸ್‌ಪಿಡಿ ಪ್ರತಿಸ್ಪರ್ಧಿ ಜೋಸೆಫೈನ್ ಆರ್ಟ್ಲೆಬ್ ಶೇಕಡಾ 36.9 ರಷ್ಟು ಮತಗಳನ್ನು ಪಡೆದಿದ್ದಾರೆ. ಈ ಹಿಂದೆ ಎಕೆಕೆ, ಮಾರ್ಕೆಲ್ನ ಉತ್ತರಾಧಿಕಾರಿಯಾಗಿದ್ದರು.
ಅಭಿವೃದ್ಧಿಯಲ್ಲಿ ಉಕ್ಕಿನ ಮಹಿಳೆ ಎನಿಸಿಕೊಂಡಿದ್ದ ಮಾರ್ಕೆಲ್ ಕೊಡುಗೆ ಜರ್ಮನಿಗೆ ಅಪಾರ. ಆದರೆ, ಚುನಾವಣೆಯಲ್ಲಿ ಮಾರ್ಕೆಲ್ ಸ್ಪರ್ಧಿಸಿಲ್ಲ, ಬದಲಾಗಿ ಮಾರ್ಕೆಲ್ ಅವರ ಕ್ರಿಶ್ಚಿಯನ್ ಡೆಮಾಕ್ರಟಿಕ್ ಯೂನಿಯನ್ ಪಕ್ಷವು ಅರ್ಮಿನ್ ಲಾಸ್ಚೆಟ್ ಅವರನ್ನು ಕಣಕ್ಕಿಳಿಸಿದೆ.