ವಿಶ್ವಸಂಸ್ಥೆ (ಜಿನಿವಾ): ಆದಿವಾಸಿ ಹಕ್ಕುಗಳ ಹೋರಾಟಗಾರ ಫಾದರ್ ಸ್ಟ್ಯಾನ್ ಸ್ವಾಮಿ ನ್ಯಾಯಾಂಗ ಬಂಧನಲ್ಲಿರುವಾಗ ಮೃತಪಟ್ಟಿರುವ ಘಟನೆ ಭಾರತದ ಮಾನವ ಹಕ್ಕುಗಳ ಇತಿಹಾಸದಲ್ಲಿ ಒಂದು ಕಳಂಕವಾಗಿ ಸದಾ ಉಳಿಯಲಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ತಜ್ಞೆ ಮೇರಿ ಲಾಲರ್ ಹೇಳಿದ್ದಾರೆ.
ಮಾನವ ಹಕ್ಕು ಪ್ರತಿಪಾದಕರ ಪರಿಸ್ಥಿತಿ ಕುರಿತು ವಿಶ್ವ ಸಂಸ್ಥೆಯ ವಿಶೇಷ ವರದಿಗಾರ್ತಿ ಆಗಿರುವ ಅವರು ಮಾತನಾಡಿ, ಎಲ್ಲ ಮಾನವ ಹಕ್ಕು ಹೋರಾಟಗಾರರನ್ನು ಮತ್ತು ಸೂಕ್ತ ಕಾನೂನಾತ್ಮಕ ಪುರಾವೆಗಳಿಲ್ಲದೇ ಬಂಧನದಲ್ಲಿರುವವರನ್ನು ಬಿಡುಗಡೆಗೊಳಿಸಬೇಕೆಂದು ಸ್ಟಾನ್ ಸ್ವಾಮಿ ಪ್ರಕರಣ ಎಲ್ಲ ಸರ್ಕಾರಗಳಿಗೆ ನೆನಪಿಸುವಂತಾಗಬೇಕು ಎಂದು ಹೇಳಿದರು.
ನವೆಂಬರ್ 2020ರಲ್ಲಿ ನಾನು ಸಹಿತ ಇತರ ವಿಶ್ವ ಸಂಸ್ಥೆಯ ತಜ್ಞರು ಭಾರತದ ಪ್ರಾಧಿಕಾರಗಳಿಗೆ ತಮ್ಮ ಅಂತಾರಾಷ್ಟ್ರೀಯ ಮಾನವ ಹಕ್ಕು ಬದ್ಧತೆಗಳನ್ನು ನೆನಪಿಸಿದ್ದೇವೆ. ಈಗ ಮತ್ತೆ ಕೇಳುತ್ತೇನೆ. ಅವರನ್ನೇಕೆ ಬಿಡುಗಡೆಗೊಳಿಸಿರಲಿಲ್ಲ? ಅವರೇಕೆ ಕಸ್ಟಡಿಯಲ್ಲಿರುವಾಗಲೇ ಮೃತಪಡುವಂತಾಯಿತು ಎಂದು ಪ್ರಶ್ನಿಸಿದ್ದಾರೆ.
ನಾಲ್ಕು ದಶಕಗಳಿಗಳಿಂದ ಮಾನವ ಹಕ್ಕುಗಳಿಗಾಗಿ ಹೋರಾಡುತ್ತಿದ್ದವರಿಗೆ ಉಗ್ರವಾದಿ ಎಂಬ ಹಣೆಪಟ್ಟಿ ಕಟ್ಟುವುದಕ್ಕೆ ಯಾವುದೇ ಸಮರ್ಥನೆಯಿಲ್ಲ ಹಾಗೂ ಫಾದರ್ ಸ್ವಾಮಿ ಅವರಂತೆ ಆರೋಪ ಹೊತ್ತು ಬಂಧನಕ್ಕೊಳಗಾಗಿ ಹಾಗೂ ಹಕ್ಕುಗಳನ್ನು ನಿರಾಕರಿಸಲ್ಪಟ್ಟು ಬೇರೆಯವರೂ ಸಾಯಬೇಕೆಂಬುದಕ್ಕೆ ಯಾವುದೇ ಕಾರಣವಿಲ್ಲ ಎಂದು ಹೇಳಿದ್ದಾರೆ.
ಸ್ವಾಮಿ ಪ್ರಕರಣ ನಿಭಾಯಿಸಿದ್ದರ ಬಗ್ಗೆ ಅಂತಾರಾಷ್ಟ್ರೀಯ ಟೀಕೆಗಳನ್ನು ಭಾರತ ಸರ್ಕಾರ ತಿರಸ್ಕರಿಸಿದೆ. ಭಾರತವು ತನ್ನೆಲ್ಲ ನಾಗರಿಕರ ಮಾನವ ಹಕ್ಕುಗಳ ರಕ್ಷಣೆಗೆ ಬದ್ಧವಾಗಿದೆ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.
ಸ್ವಾಮಿ ಅವರನ್ನು ಕಾನೂನಿನಡಿ ಸರಿಯಾದ ಪ್ರಕ್ರಿಯೆ ನಡೆಸಿ ತನಿಖಾ ಸಂಸ್ಥೆ ಬಂಧಿಸಿದೆ. ಅವರ ವಿರುದ್ಧದ ಆರೋಪಗಳು ಗಂಭೀರವಾಗಿದ್ದರಿಂದ ನ್ಯಾಯಾಲಯಗಳು ಅವರ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದವು. ಭಾರತದಲ್ಲಿ ಅಧಿಕಾರಿಗಳು ಕಾನೂನು ಉಲ್ಲಂಘನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ. ಅದು ಕಾನೂನು ಬದ್ಧ ಹಕ್ಕುಗಳ ಉಲ್ಲಂಘನೆಯಲ್ಲ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟನೆ ನೀಡಿದೆ.