ಪ್ರಿಸ್ಟಿನಾ(ಕೊಸೊವೊ): ಶುಕ್ರವಾರ ಪಶ್ಚಿಮ ಕೊಸೊವೊದಲ್ಲಿ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಬಸ್ ಮೇಲೆ ಶುಕ್ರವಾರ ಅಪರಿಚಿತ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಮೂವರು ಸಾವನ್ನಪ್ಪಿದ್ದಾರೆ ಮತ್ತು ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ರಾಜಧಾನಿ ಪ್ರಿಸ್ಟಿನಾದಿಂದ ಪಶ್ಚಿಮಕ್ಕೆ 90 ಕಿಲೋಮೀಟರ್ ದೂರವಿರುವ ಗ್ಲೋಗ್ಜಾನ್‌ನಲ್ಲಿ ಬಸ್, ದುಷ್ಕರ್ಮಿಯಿಂದ ಗುಂಡಿನ ದಾಳಿಗೆ ಒಳಗಾಯಿತು ಎಂದು ಪೇಜಾದಲ್ಲಿ ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ತೀವ್ರವಾಗಿ ಗಾಯಗೊಂಡಿದ್ದ ಮೂವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯ್ತು. ಇವರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಎಂಟು ಮಂದಿ ವಿದ್ಯಾರ್ಥಿಗಳು ಇದ್ದ ಬಸ್‌ನತ್ತ ಒಬ್ಬ ಮುಸುಕುಧಾರಿ ಬಂದೂಕುಧಾರಿ ಸ್ವಯಂಚಾಲಿತ ರೈಫಲ್‌ನಿಂದ ಗುಂಡು ಹಾರಿಸಿದ್ದಾನೆ ಎಂದು ಪೇಜಾ ಉಪ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.
ಅಧ್ಯಕ್ಷ ವ್ಜೋಸಾ ಒಸ್ಮಾನಿ ಅವರು ಈ ದಾಳಿಯನ್ನು "ಆಘಾತಕಾರಿ" ಎಂದು ಹೇಳಿದ್ದು, ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ ಮತ್ತು ಅಪರಾಧಿಗಳನ್ನು ಆದಷ್ಟು ಬೇಗ ಪತ್ತೆ ಮಾಡುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ವಿದ್ಯಾರ್ಥಿಗಳಿದ್ದ ಬಸ್ ಮೇಲೆ ದಾಳಿ ನಡೆಸಿರುವುದು ನಮ್ಮ ಸಾರ್ವಜನಿಕ ಸುವ್ಯವಸ್ಥೆ ಮತ್ತು ಭದ್ರತೆಗೆ ಧಕ್ಕೆಯುಂಟು ಮಾಡಿದೆ. ನಾಗರಿಕರ ಭದ್ರತೆಯು ಆದ್ಯತೆಯಾಗಿದೆ ಮತ್ತು ಅಂತಹ ಉದ್ದೇಶವನ್ನು ಪೂರೈಸುವಲ್ಲಿ ನಾವು ಹಿಂದೆ ಸರಿಯುವುದಿಲ್ಲ ಎಂದು ಅವರು ತಮ್ಮ ಫೇಸ್‌ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.