ಜಿನೀವಾ : ಒಮಿಕ್ರಾನ್ ಸೇರಿದಂತೆ ಉದಯೋನ್ಮುಖ ರೂಪಾಂತರಗಳ ವಿರುದ್ಧ ನಿರಂತರ ರಕ್ಷಣೆ ನೀಡಲು ಪ್ರಸ್ತುತ ಇರುವ ಕೋವಿಡ್ -19 ಲಸಿಕೆಗಳನ್ನು ನವೀಕರಿಸಬೇಕಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳಿದೆ.
ಕೋವಿಡ್-19 ಲಸಿಕೆ ಸಂಯೋಜನೆ (TAG-CO-VAC) ಕುರಿತು 18 ಜನ ತಜ್ಞರನ್ನೊಳಗೊಂಡ WHO ನ ತಾಂತ್ರಿಕ ಸಲಹಾ ಗುಂಪು ಮಾಹಿತಿ ನೀಡಿದೆ. ಪ್ರಸ್ತುತ ಇರುವ ಲಸಿಕೆಗಳು ತೀವ್ರ ಕಾಯಿಲೆ ಮತ್ತು ವೇರಿಯಂಟ್ ಆಫ್ ಕನ್ಸರ್ನ್ (VOC) ನಿಂದ ಉಂಟಾಗುವ ಸಾವಿನ ವಿರುದ್ಧ ಹೆಚ್ಚಿನ ಮಟ್ಟದ ರಕ್ಷಣೆಯನ್ನು ಒದಗಿಸುತ್ತವೆ. ಆದರೂ ಸೋಂಕು ತಡೆಗಟ್ಟುವ ಲಸಿಕೆಗಳನ್ನು ಅಭಿವೃದ್ಧಿಪಡಿಸಬೇಕಾಗಿದೆ ಎಂದು ಮಂಗಳವಾರ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಇನ್ನು ಪ್ರಸ್ತುತ ಪ್ರಪಂಚಾದ್ಯಂತ ಕಾಳ್ಗಿಚ್ಚಿನಂತೆ ಹರಡುತ್ತಿರುವ ಹೊಸ ಒಮಿಕ್ರಾನ್ ರೂಪಾಂತರವನ್ನು ತಡೆಗಟ್ಟುವಲ್ಲಿ ಅಸ್ತಿತ್ವದಲ್ಲಿರುವ ಲಸಿಕೆಗಳು ಕಡಿಮೆ ಪರಿಣಾಮಕಾರಿ ಎಂದು ಪ್ರಾಥಮಿಕ ಮಾಹಿತಿಯು ಸೂಚಿಸಿದೆ. ಅಷ್ಟೇ ಅಲ್ಲದೆ, ಪ್ರಸ್ತುತ ಇರುವ ಲಸಿಕೆಗಳ ಬೂಸ್ಟರ್ ಡೋಸ್‌ಗಳು ಸಾಕಾಗದೇ ಇರಬಹುದು ಎಂದು ಡಬ್ಲ್ಯುಎಚ್‌ಒ ಎಚ್ಚರಿಸಿದೆ.
ಓದಿ: ಬೂಸ್ಟರ್ ಡೋಸ್ ಯಾವಾಗ ಪಡೆಯಬೇಕೆಂಬ ಗೊಂದಲ ಇದೆಯೇ?: ಹೀಗೆ ಮಾಡಿ..