ಮಾಸ್ಕೋ : ಸೆಚೆನೋವ್ದಲ್ಲಿ ವಿಶ್ವದ ಮೊದಲ ಕೊರೊನಾ ವೈರಸ್ ಲಸಿಕೆಯ ಕ್ಲಿನಿಕಲ್ ಪ್ರಯೋಗವನ್ನು ಮಾಸ್ಕೋ ರಾಜ್ಯ ವೈದ್ಯಕೀಯ ವಿಶ್ವವಿದ್ಯಾಲಯ ಪೂರ್ಣಗೊಳಿಸಿದೆ ಎಂದು ಟ್ರಾನ್ಸ್ಲೇಶನಲ್ ಮೆಡಿಸಿನ್ ಅಂಡ್ ಬಯೋ ಟೆಕ್ನಾಲಜಿ ಸಂಸ್ಥೆಯ ನಿರ್ದೇಶಕ ವಾಡಿಮ್ ತಾರಸೊವ್ ತಿಳಿಸಿದ್ದಾರೆ. ಲಸಿಕೆ ಪ್ರಯೋಗಿಸಲ್ಪಟ್ಟ ಮೊದಲ ತಂಡದ ಸ್ವಯಂ ಸೇವಕರನ್ನು ಜುಲೈ 20 ರಂದು ಡಿಸ್ಚಾರ್ಜ್ ಮಾಡಲಾಗುವುದು ಎಂದೂ ಅವರು ಹೇಳಿದ್ದಾರೆ.
ವಿಶ್ವ ವಿದ್ಯಾನಿಲಯವು ಜೂನ್ 18 ರಂದು ರಷ್ಯಾದ ಗಮಾಲಿ ಇನ್ಸಿಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಮತ್ತು ಮೈಕ್ರೋಬಯೋಲಜಿ ತಯಾರಿಸಿದ ಲಸಿಕೆಯ ಕ್ಲಿನಿಕಲ್ ಪ್ರಯೋಗ ಪ್ರಾರಂಭಿಸಿತ್ತು. ಕ್ಲಿನಿಕಲ್ ಪ್ರಯೋಗದ ಉದ್ದೇಶ ಮಾನವನ ಆರೋಗ್ಯಕ್ಕೆ ಲಸಿಕೆಯ ಸುರಕ್ಷತೆಯನ್ನು ತೋರಿಸುವುದಾಗಿತ್ತು. ಅದನ್ನು ಯಶಸ್ವಿಯಾಗಿ ಮಾಡಲಾಗಿದೆ. ಲಸಿಕೆಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಲಸಿಕೆಗಳ ಸುರಕ್ಷತೆಗೆ ಅನುಗುಣವಾಗಿದೆ ಎಂದು ಸೆಚೆನೊವ್ ವಿಶ್ವವಿದ್ಯಾಲಯದ ಮೆಡಿಕಲ್ ಪ್ಯಾರಸಿಟಾಲಜಿ, ಟ್ರೋಪಿಕಲ್ ಅಂಡ್ ವೆಕ್ಟರ್ ಬೋರ್ನ್ ಡಿಸೀಸ್ ವಿಭಾಗದ ನಿರ್ದೇಶಕ ಅಲೆಕ್ಸಾಂಡರ್ ಲುಕಾಶೆವ್ ಹೇಳಿದ್ದಾರೆ.
ಹೆಚ್ಚಿನ ಲಸಿಕೆಗಳ ಉತ್ಪಾದನೆ ಉತ್ಪಾದಕರನ್ನು ಅನುಸರಿಸಿ ಇರಲಿದೆ. ಸಂಕೀರ್ಣತೆ ಮತ್ತು ಕೊರೊನಾ ಪ್ರಕರಣಗಳ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು ಲಸಿಕೆ ಉತ್ಪಾದನೆ ಮಾಡಲಾಗುವುದು ಎಂದು ಲುಕಾವೆಶ್ ತಿಳಿಸಿದ್ದಾರೆ.
ಕೊರೊನಾ ಸಂದಿಗ್ದತೆಯ ಸಂದರ್ಭದಲ್ಲಿ ಸೆಚೆನೋವ್ ವಿಶ್ವವಿದ್ಯಾನಿಲಯ ಕೇವಲ ಒಂದು ಶಿಕ್ಷಣ ಸಂಸ್ಥೆಯಾಗಿ ಇರಲಿಲ್ಲ. ಔಷಧಗಳಂತಹ ಪ್ರಮುಖ ಮತ್ತು ಸಂಕೀರ್ಣ ಉತ್ಪನ್ನಗಳ ರಚನೆಯಲ್ಲಿ ಭಾಗವಹಿಸಬಲ್ಲ ವೈಜ್ಞಾನಿಕ ಮತ್ತು ತಾಂತ್ರಿಕ ಸಂಶೋಧನಾ ಕೇಂದ್ರವಾಗಿಯೂ ಕಾರ್ಯನಿರ್ವಹಿಸಿತ್ತು. ಪೂರ್ವಭಾವಿ ಅಧ್ಯಯನಗಳಿಂದ ಪ್ರಾರಂಭಿಸಿ ಪ್ರೋಟೋಕಾಲ್ ಅಭಿವೃದ್ಧಿಯವರೆಗೂ ಕಾರ್ಯನಿರ್ವಹಿಸಿದ್ದೇವೆ ಪ್ರಸ್ತುತ ಕ್ಲಿನಿಕಲ್ ಪ್ರಯೋಗ ನಡೆಯುತ್ತಿದೆ ಎಂದು ವಾಡಿಮ್ ತಾರಸೋವ್ ಹೇಳಿದ್ದಾರೆ.