ಲಂಡನ್: ಇಂಗ್ಲೆಂಡ್ನಲ್ಲಿ ಕೊರೊನಾಗೆ ಬಲಿಯಾದವರ ಜನಾಂಗೀಯ ಅಲ್ಪಸಂಖ್ಯಾತರ ಪೈಕಿ ಅನಿವಾಸಿ ಭಾರತೀಯರ ಪ್ರಮಾಣವೇ ಸಿಂಹಪಾಲಿರುವುದು ದುರಾದೃಷ್ಟಕರ ಸಂಗತಿಯಾಗಿದೆ.
ಏ.17ರ ವರೆಗೆ ದೇಶದಲ್ಲಿ ಒಟ್ಟು 13,918 ಕೋವಿಡ್-19 ರೋಗಿಗಳು ಮೃತಪಟ್ಟಿದ್ದು, ಇದರಲ್ಲಿ ಶೇ.16.2 ರಷ್ಟು ಬಲಿಪಶುಗಳು ಕಪ್ಪು ವರ್ಣೀಯರು, ಏಷ್ಯನ್ ಮತ್ತು ಅಲ್ಪಸಂಖ್ಯಾತ ಜನಾಂಗೀಯದವರಾಗಿದ್ದಾರೆ (BAME). ಶೇ.16.2 ರಲ್ಲಿ ಶೇ.3 ರಷ್ಟು ಇಂಗ್ಲೆಂಡ್ನಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದವರು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಮಾಹಿತಿ ಇಂಗ್ಲೆಂಡ್ನ ನ್ಯಾಷನಲ್ ಹೆಲ್ತ್ ಸರ್ವಿಸ್ (NHS) ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪಟ್ಟಿಯಲ್ಲಿ ತಿಳಿದು ಬಂದಿದೆ.
ಅನಿವಾಸಿ ಭಾರತೀಯರ ನಂತರದ ಸ್ಥಾನದಲ್ಲಿ ಕೆರಿಬಿಯನ್ಸ್ (ಶೇ.2.9) ಹಾಗೂ ಪಾಕಿಸ್ತಾನಿಯರಿದ್ದಾರೆ (ಶೇ.2.1). ಈ ಕುರಿತು ಪ್ರತಿಕ್ರಿಯೆ ನೀಡಿರುವ ಬ್ರಿಟಿಷ್ ವೈದ್ಯಕೀಯ ಸಂಘದ (ಬಿಎಂಎ) ಅಧ್ಯಕ್ಷ ಡಾ.ಚಾಂದ್ ನಾಗ್ಪಾಲ್, ತಾರತಮ್ಯ ಮಾಡದೇ ದೇಶದಲ್ಲಿರುವ ಎಲ್ಲಾ ಕ್ಷೇತ್ರಗಳ, ಜನಾಂಗಗಳನ್ನು ರಕ್ಷಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಇಂಗ್ಲೆಂಡ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಜನಾಂಗೀಯ ಅಲ್ಪಸಂಖ್ಯಾತರ ಪೈಕಿ ಅನೇಕ ಕೊರೊನಾ ಸೋಂಕಿತರು ಹೃದಯ ಸಂಬಂಧಿ ಕಾಯಿಲೆ ಮತ್ತು ಮಧುಮೇಹದಿಂದ ಬಳಲುತ್ತಿದ್ದು, ಇದು ಕೂಡ ಅವರ ಸಾವಿಗೆ ಕಾರಣವಾಗಿದೆ. ಇನ್ನು ನಿರ್ದಿಷ್ಟ ಬಗೆಯ ವಿಟಮಿನ್ ಕೊರತೆ, ಬಹು - ಪೀಳಿಗೆಯ ಕುಟುಂಬಗಳಲ್ಲಿನ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವುದು ಕೂಡ ಕಾರಣಗಳಾಗಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.