ಮಾಸ್ಕೋ(ರಷ್ಯಾ): ಉಕ್ರೇನ್ ನಡೆಯುತ್ತಿರುವ ಯುದ್ಧದಲ್ಲಿ ರಷ್ಯಾದಲ್ಲಿ ಕಡ್ಡಾಯ ಸೇನಾ ಸೇವೆಗೆ ಹೆಸರು ದಾಖಲಿಸಿಕೊಂಡವರು ಮತ್ತು ಮೀಸಲು ಪಡೆಯ ಯೋಧರು ಭಾಗವಹಿಸುವುದಿಲ್ಲ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಂಗಳವಾರ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಮಾತನಾಡಿದ ಅವರು ಮೀಸಲು ಪಡೆಗಳ ಯೋಧರನ್ನು ಯುದ್ಧಕ್ಕೆ ನಿಯೋಜನೆ ಮಾಡುವುದಿಲ್ಲ. ವೃತ್ತಿಪರ ಯೋಧರು ಈ ಯುದ್ಧದಲ್ಲಿ ಭಾಗವಹಿಸುತ್ತಾರೆ. ಅವರು ರಷ್ಯಾದ ಜನರಿಗೆ ಭದ್ರತೆ ಮತ್ತು ಶಾಂತಿ ಒದಗಿಸುತ್ತಾರೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.
ಅದರ ಜೊತೆಗೆ ಯುದ್ಧದಲ್ಲಿ ಭಾಗವಹಿಸಿರುವ ಸೈನಿಕರು ಮತ್ತು ಅಧಿಕಾರಿಗಳ ತಾಯಂದಿರು, ಪತ್ನಿಯರು, ಸಹೋದರಿಯರು, ಗೆಳತಿಯರನ್ನು ಉದ್ದೇಶಿಸಿ ಮಾತನಾಡಿದ ಪುಟಿನ್ ನೀವು ನಿಮ್ಮ ಪ್ರೀತಿಪಾತ್ರರ ಬಗ್ಗೆ ಚಿಂತಿಸುತ್ತಿದ್ದೀರಿ ಎಂದು ನಾನು ಅರ್ಥ ಮಾಡಿಕೊಂಡಿದ್ದೇನೆ. ನೀವು ಅವರ ಬಗ್ಗೆ ಹೆಮ್ಮೆಪಡಬಹುದು. ಇಡೀ ದೇಶವು ಅವರ ಬಗ್ಗೆ ಹೆಮ್ಮೆಪಡುತ್ತದೆ ಎಂದಿದ್ದಾರೆ.
ಪ್ರಸ್ತುತ ಉಕ್ರೇನ್ನ ಕೆಲವು ನಗರಗಳಲ್ಲಿ ಕದನ ವಿರಾಮ ಘೋಷಿಸಲಾಗಿದೆ. ಕೈವ್, ಚೆರ್ನಿಹಿವ್, ಸುಮಿ, ಖಾರ್ಕಿವ್ ಮತ್ತು ಮರಿಯುಪೋಲ್ ನಗರಗಳಲ್ಲಿ ಮಾನವೀಯ ಕಾರಿಡಾರ್‌ಗಳನ್ನು ರಚಿಸಿ, ನಾಗರಿಕರ ಸುರಕ್ಷತ ಸ್ಥಳಾಂತರಕ್ಕೆ ಅನುವು ಮಾಡಿಕೊಡಲಾಗಿದೆ.
ಇದನ್ನೂ ಓದಿ: ಉಕ್ರೇನ್ ಸಂಘರ್ಷ: ನಾಗರಿಕರ ಸ್ಥಳಾಂತರಕ್ಕೆ ರಷ್ಯಾದಿಂದ ಐದು ನಗರಗಳಲ್ಲಿ ಕದನ ವಿರಾಮ