ಲಂಡನ್( ಇಂಗ್ಲೆಂಡ್) : ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ದಿ ನ್ಯಾಯಾರ್ಕ್ ಟೈಮ್ಸ್ ನಲ್ಲಿ ಬರೆದ ತಮ್ಮ ಅಭಿಪ್ರಾಯದಲ್ಲಿ ರಷ್ಯಾವನ್ನು ಹಾಡಿ ಹೊಗಳಿದ್ದಾರೆ. ಇವರು ರಷ್ಯಾವನ್ನು ಶ್ರೇಷ್ಠ ರಾಷ್ಟ್ರ ಮತ್ತು ಮಹಾನ್ ವಿಶ್ವ ಶಕ್ತಿ ಎಂದು ಬಣ್ಣಿಸಿದ್ದಾರೆ. ನಮಗೆ ರಷ್ಯಾದ ಜನರ ಮೇಲೆ ಯಾವುದೇ ಹಗೆತನವಿಲ್ಲ, ರಷ್ಯಾದಂತಹ ಶ್ರೇಷ್ಟ ರಾಷ್ಟ್ರ,ವಿಶ್ವ ಶಕ್ತಿಯನ್ನು ದೂಷಿಸಲು ನಮಗೆ ಇಷ್ಟವಿಲ್ಲ ಎಂದು ಇದೇ ವೇಳೆ ಹೇಳಿದ್ದಾರೆ.
ಉಕ್ರೇನ್ ನ್ಯಾಟೋ ಸದಸ್ಯತ್ವದ ಬಗ್ಗೆ ಯಾವುದೇ ನಿರೀಕ್ಷೆ ಹೊಂದಿಲ್ಲ. ಈ ಬಗ್ಗೆ ನಾವು ರಷ್ಯಾದ ಭದ್ರತೆಯ ಕಾಳಜಿ ಬಗ್ಗೆ ಸ್ಪಂದಿಸಲು ತಯಾರಿರುವುದಾಗಿ ಬೋರಿಸ್ ಹೇಳಿದ್ದಾರೆ. ಇದು ನ್ಯಾಟೋ ಸಂಘರ್ಷ ಅಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ, ರಷ್ಯಾದ ಆಕ್ರಮಣಕಾರಿತನ ವಿಫಲಗೊಳ್ಳುವಂತೆ ಮಾಡಬೇಕು ಎಂದು ಇದೇ ವೇಳೆ ಅವರು ಪ್ರತಿಪಾದನೆ ಮಾಡಿದ್ದಾರೆ.
ಈಗಾಗಲೇ ರಷ್ಯಾಕ್ಕೆ ಆರ್ಥಿಕ ಹೊಡೆತಗಳನ್ನು ನೀಡುವುದರ ಮೂಲಕ ನಿಯಂತ್ರಿಸಲಾಗುತ್ತಿದೆ. ಮಾಸ್ಟರ್ ಕಾರ್ಡ್ ಮತ್ತು ವೀಸಾ ಈಗಾಗಲೇ ರಷ್ಯಾದಲ್ಲಿ ತಮ್ಮ ಸೇವೆಯನ್ನು ಸ್ಥಗಿತ ಗೊಳಿಸಿದೆ ಎಂದು ಅವರು ಹೇಳಿದ್ದಾರೆ. ಕನಿಷ್ಠ 13,000 ನಾಗರಿಕರು ಸಾವನ್ನಪ್ಪಿದ್ದಾರೆ ರಷ್ಯಾದ ಸುದ್ದಿ ಸಂಸ್ಥೆ TASS ವರದಿ ಮಾಡಿದೆ ಎಂಬುದನ್ನು ಪ್ರಸ್ತಾಪಿಸಿದ ಅವರು, ಹಲವು ಅಮಾಯಕರು, ಮಕ್ಕಳು ರಷ್ಯಾ ದಾಳಿಗೆ ಬಲಿಯಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಇಂದು ರಷ್ಯಾ ಮತ್ತು ಉಕ್ರೇನಿಯನ್ ಅಧಿಕಾರಿಗಳ ನಡುವೆ ಮೂರನೇ ಸುತ್ತಿನ ಶಾಂತಿ ಮಾತುಕತೆಗಳು ನಡೆಯಲಿವೆ, ಯುದ್ಧಗಳನ್ನು ತಡೆಯಲು ರಾಜತಾಂತ್ರಿಕ ಪ್ರಯತ್ನಗಳನ್ನು ಮುಂದುವರೆಸುವುದಾಗಿ ತಿಳಿದು ಬಂದಿದೆ.