ಲಂಡನ್(ಇಂಗ್ಲೆಂಡ್): ಉತ್ತರ ಯೂರೋಪ್ನಲ್ಲಿ ಕೇವಲ ಮೂರೇ ದಿನಗಳಲ್ಲಿ ಎರಡನೇ ಚಂಡಮಾರುತ ಅಪ್ಪಳಿಸಿದ್ದು, ಕನಿಷ್ಠ 8 ಮಂದಿ ವಿವಿಧ ಅವಘಡಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅಷ್ಟೇ ಅಲ್ಲದೇ ಮರಗಳು ಉರುಳಿ ಬಿದ್ದಿದ್ದು, ರೈಲು ಸೇವೆಗಳು ರದ್ದಾಗಿವೆ.
ಬ್ರಿಟನ್ನ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಚಂಡಮಾರುತ ಗಂಟೆಗೆ 196 ಕಿಲೋಮೀಟರ್ ವೇಗದಲ್ಲಿ ಬೀಸುತ್ತಿದ್ದು, ಇಂಗ್ಲೆಂಡ್ನಲ್ಲಿ ಇದು ಪ್ರಬಲವಾಗಿದೆ. ಇಂಗ್ಲೆಂಡ್ನ ದಕ್ಷಿಣ ಭಾಗದಲ್ಲಿರುವ ಐಲ್ ಆಫ್ ವೈಟ್ ದ್ವೀಪದಲ್ಲಿ ಅವಘಡಗಳು ಹೆಚ್ಚಾಗಿ ಸಂಭವಿಸಿವೆ. ಹೀಗಾಗಿ ಇಂಗ್ಲೆಂಡ್ನ ಬಹುತೇಕ ಭಾಗಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಈಗ ಯುನೈಸ್ ಚಂಡಮಾರುತ ಯೂರೋಪ್ನ ಮುಖ್ಯಭೂಭಾಗಕ್ಕೆ ತೆರಳುತ್ತಿದೆ. ಇದರಿಂದಾಗಿ ಬೆಲ್ಜಿಯಂ, ನೆದರ್ಲ್ಯಾಂಡ್ಸ್, ಡೆನ್ಮಾರ್ಕ್ ಮತ್ತು ಜರ್ಮನಿಯಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಲಾಗಿದೆ. ಜರ್ಮನಿಯಲ್ಲಿ ಇದನ್ನು ಸ್ಟಾರ್ಮ್ ಝೆನೆಪ್ ಎಂದು ಕರೆಯುತ್ತಾರೆ.
ಯುನೈಸ್ ಚಂಡಮಾತುತದಿಂದ ಬ್ರಿಟನ್‌ನಲ್ಲಿ ಸಾರಿಗೆ ಸಂಪರ್ಕದಲ್ಲೂ ಅಸ್ತವ್ಯಸ್ತ ಉಂಟಾಗಿದೆ. ಡೋವರ್‌ನ ಇಂಗ್ಲಿಷ್ ಕಾಲುವೆಯ ಬಂದರನ್ನು ಮುಚ್ಚಲಾಗಿದೆ. ಇಂಗ್ಲೆಂಡ್ ಮತ್ತು ವೇಲ್ಸ್‌ಗಳನ್ನು ಸಂಪರ್ಕಿಸುವ ಸೇತುವೆಗಳನ್ನು ಬಂದ್ ಮಾಡಲಾಗಿದೆ. ಲಂಡನ್ನ ನ ಒಳಗೆ ಮತ್ತು ಹೊರಗೆ ಚಲಿಸುವ ರೈಲುಗಳನ್ನು ರದ್ದು ಮಾಡಲಾಗಿದೆ.
ಇದನ್ನೂ ಓದಿ: ನೆದರ್ಲ್ಯಾಂಡ್ಸ್ನಲ್ಲಿ ಬಿರುಗಾಳಿ: ಸುಮಾರು 167 ವಿಮಾನಗಳ ಹಾರಾಟ ರದ್ದು
ಬ್ರಿಟನ್‌ನಲ್ಲಿ ಕನಿಷ್ಠ ಮೂರು ಮಂದಿ ಸಾವನ್ನಪ್ಪಿದ್ದಾರೆ. ನೆದರ್‌ಲ್ಯಾಂಡ್ಸ್‌ನ ಆಮ್‌ಸ್ಟರ್‌ಡ್ಯಾಮ್ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಮೂವರು, ಬೆಲ್ಜಿಯಂನಲ್ಲಿ ಓರ್ವ ವೃ ದ್ಧ, ಐರ್ಲೆಂಡ್‌ನ ಕೌಂಟಿ ವೆಕ್ಸ್‌ಫೋರ್ಡ್‌ನಲ್ಲಿ ಮರಬಿದ್ದು ಓರ್ವ ಕಾರ್ಮಿಕ ಮೃತಪಟ್ಟಿದ್ದಾನೆ.
ಇನ್ನು ಯುನೈಸ್ ಚಂಡಮಾರುತ ಇದೇ ವಾರದಲ್ಲಿ ಯುರೋಪ್‌ಗೆ ಅಪ್ಪಳಿಸಿರುವ ಎರಡನೇ ಚಂಡಮಾರುತವಾಗಿದೆ. ಮೊದಲ ಚಂಡಮಾರುತವು ಜರ್ಮನಿ ಮತ್ತು ಪೋಲೆಂಡ್‌ನಲ್ಲಿ ಕನಿಷ್ಠ ಐದು ಜನರನ್ನು ಬಲಿತೆಗೆದುಕೊಂಡಿತ್ತು. ಇಂಗ್ಲೆಂಡಿನ ಯೂನಿವರ್ಸಿಟಿ ಆಫ್ ರೀಡಿಂಗ್‌ನ ಹವಾಮಾನಶಾಸ್ತ್ರಜ್ಞ ಪೀಟರ್ ಇನ್ನೆಸ್, ಪೂರ್ವ ಅಟ್ಲಾಂಟಿಕ್ ಮಹಾಸಾಗರದಲ್ಲಿನ ಹವಾಮಾನ ವೈಪರಿತ್ಯವೇ ಚಂಡಮಾರುತಕ್ಕೆ ಕಾರಣ ಎನ್ನಲಾಗಿದೆ.