ಲಂಡನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನನ್ನ ಕಕ್ಷಿದಾರ ಜೂಲಿಯನ್ ಅಸ್ಸಾಂಜೆಗೆ ಪರೋಕ್ಷವಾಗಿ 'ವಿನ್-ವಿನ್' ಒಪ್ಪಂದ ಮಾಡಿಕೊಳ್ಳುವಂತೆ ಹೇಳಿದ್ದರು ಎಂದು ಅಸ್ಸಾಂಜ್ ಪರ ವಕೀಲೆ ಲಂಡನ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ವಿರುದ್ಧ ಕಂಪ್ಯೂಟರ್ ಹ್ಯಾಕಿಂಗ್ ಆರೋಪವಿದೆ. ಅಮೆರಿಕ ಸೇನೆಯ ಸರ್ವರ್ ಹ್ಯಾಕ್ ಮಾಡಿ ತಮ್ಮ ವಿಕಿಲೀಕ್ಸ್ ಜಾಲತಾಣದಲ್ಲಿ ಪ್ರಕಟಿಸಿ ಅಸ್ಸಾಂಜೆ ಸುದ್ದಿಯಾಗಿದ್ದರು.
ಇದು ಅಮೆರಿಕವನ್ನೇ ನಡುಗಿಸಿತ್ತು. ಇದರೊಂದಿಗೆ 2016ರ ಚುನಾವಣೆಗೂ ಮುಂಚೆ ಡೆಮಾಕ್ರಟಿಕ್ ಪಕ್ಷದ ಇಮೇಲ್ ಮಾಹಿತಿ ಕದ್ದು, ತಮ್ಮ ಸುದ್ದಿತಾಣವಾದ ವಿಕಿಲೀಕ್ಸ್‌ನಲ್ಲಿ ಪ್ರಕಟಿಸಿದ್ದರು. ಹೀಗಾಗಿ ಜೂಲಿಯನ್ ಅಸ್ಸಾಂಜೆ, ಅಮೆರಿಕಗೆ ಮೋಸ್ಟ್ ವಾಂಟೆಡ್ ಆಗಿದ್ದಾರೆ. ಅಸ್ಸಾಂಜೆಯನ್ನು ಹಸ್ತಾಂತರ ಮಾಡಬೇಕೆಂದು ಅಮೆರಿಕ ಕಾಯುತ್ತಿದೆ. ಡೆಮಾಕ್ರಟಿಕ್ ನ್ಯಾಷನಲ್ ಕಮಿಟಿ ಇಮೇಲ್ ಮಾಹಿತಿ ಸೋರಿಕೆ ಮಾಡಿರುವ ಆರೋಪ ಅಸ್ಸಾಂಜೆ ಮೇಲಿದ್ದು, ಅದರ ಮೂಲವನ್ನು ಅಸ್ಸಾಂಜೆ ಈವರೆಗೂ ಬಹಿರಂಗಪಡಿಸಿಲ್ಲ.
ಹೀಗಾಗಿ, ವಿಕಿಲೀಕ್ಸ್‌ನಲ್ಲಿ ತಮ್ಮ ಕೆಲಸಕ್ಕೆ ಸಂಬಂಧಿಸಿದ ಆರೋಪಗಳನ್ನು ಎದುರಿಸಲು ಅಮೆರಿಕಗೆ ಹಸ್ತಾಂತರವಾಗುವ ಸಾಧ್ಯತೆಗಳ ವಿರುದ್ಧ ಅಸ್ಸಾಂಜೆ ಹೋರಾಡುತ್ತಿದ್ದಾರೆ. ಈ ಕುರಿತು ಲಂಡನ್ ಕೋರ್ಟ್ನಲ್ಲಿ ಅಸ್ಸಾಂಜೆ ವಿಚಾರಣೆ ಎದುರಿಸುತ್ತಿದ್ದಾರೆ.
ಡೆಮಾಕ್ರಟಿಕ್ ಪಕ್ಷದ ಕೆಲ ಅಗತ್ಯ ದಾಖಲೆಗಳ ಸೋರಿಕೆಯ ಮೂಲ ಬಹಿರಂಗಪಡಿಸಿದ್ರೆ, ಅಮೆರಿಕಗೆ ಹಸ್ತಾಂತರಿಸುವುದನ್ನು ತಪ್ಪಿಸುತ್ತೇನೆ ಎಂದು ಅಸ್ಸಾಂಜೆ ಜತೆ ಟ್ರಂಪ್ ಒಪ್ಪಂದ ಮಾಡಿಕೊಂಡಿದ್ದರು ಎಂದು ಅಸ್ಸಾಂಜೆ ಪರ ವಕೀಲೆ ಕೋರ್ಟ್ನಲ್ಲಿ ಹೇಳಿದ್ದಾರೆ. ಸದ್ಯ ಅಸ್ಸಾಂಜೆ ಪ್ರಕರಣದಲ್ಲಿ ಟ್ರಂಪ್ ಭಾಗಿಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.