ಕೊರೊನಾ ವೈರಸ್ ಹಾವಳಿಯಿಂದ ಜಗದಗಲ ನಗರಗಳಲ್ಲಿ ನೀರವ ಮೌನ ಆವರಿಸುತ್ತಿದೆ. ಸಹಜವಾಗಿಯೇ ವಾಯುಮಾಲಿನ್ಯ, ಶಬ್ಧಮಾಲಿನ್ಯದ ಪ್ರಮಾಣದಲ್ಲಿ ಗಮನಾರ್ಹ ಇಳಿಕೆ ಕಂಡು ಬಂದಿದೆ.
ಕೋವಿಡ್-19 ವ್ಯಾಪಿಸುತ್ತಿರುವ ಪರಿಣಾಮ ಜನಜೀವನದ ದಿನಚರಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಕಾರ್ಖಾನೆ, ಉದ್ದಿಮೆಗಳು ಬಾಗಿಲು ಹಾಕಿವೆ. ಇದರಿಂದ ವಾತಾವರಣದಲ್ಲಿ ಸಹಜವಾಗಿಯೇ ಸಾರಜನಕ ಡೈಆಕ್ಸೈಡ್ ಪ್ರಮಾಣ ಹಾಗು ಇನ್ನಿತರ ಮಾಲಿನ್ಯಕಾರಕಗಳು ಇಳಿಕೆಯಾಗಿವೆ.
ಈ ಸಂಬಂಧ ಯುರೋಪಿಯನ್ ಬಾಹ್ಯಾಕಾಶ ಏಜೆನ್ಸಿಯ (ಇಎಸ್‌ಎ) ಸೆಂಟಿನೆಲ್ -5 ಪಿ ಭೂ-ವೀಕ್ಷಣಾ ಉಪಗ್ರಹವು ಒಂದು ಚಿತ್ರವನ್ನೂ ಸಹ ಸೆರೆಹಿಡಿದು ಭೂಮಿಗೆ ಕಳುಹಿಸಿದೆ. ಈ ಚಿತ್ರವನ್ನು ವಿಜ್ಞಾನಿಗಳು ವಿಶ್ಲೇಷಿಸಿದ್ದು ವಾತಾವರಣದಲ್ಲಿ ಮಾಲಿನ್ಯ ಕಡಿಮೆಯಾಗಿದ್ದು ಗೋಚರಿಸಿದೆ. ಈ ಇಳಿಕೆಗೆ ಕೊರೊನಾ ಹಾವಳಿ ಮುಖ್ಯ ಕಾರಣ. ಹಾಗಂತ, ಇದೊಂದೇ ಕಾರಣವಲ್ಲ. ಸಾಮಾನ್ಯವಾಗಿ ಹವಾಮಾನ ಪರಿಸ್ಥಿತಿಯಲ್ಲಿನ ಏರುಪೇರು ಕೂಡಾ NO2ನಲ್ಲಿನ ಇಳಿಕೆಗೆ ಕಾರಣವಾಗಿದೆ ಅಂತ ವಿಜ್ಞಾನಿಗಳು ಹೇಳುತ್ತಾರೆ.