ಬರ್ಮಿಂಗ್ಹ್ಯಾಮ್ : ಸಾಮಾನ್ಯವಾಗಿ 7-8 ತಿಂಗಳಲ್ಲಿ ಜನಿಸುವ ನವಜಾತ ಶಿಶುಗಳು ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಇರುತ್ತದೆ. ಆದರೆ, ಇಲ್ಲೊಂದು ಶಿಶು ಕೇವಲ 21 ವಾರಕ್ಕೆ ಜನಿಸಿ ಇಡೀ ವೈದ್ಯಕೀಯ ಲೋಕವೇ ಅಚ್ಚರಿ ಪಡುವ ರೀತಿ ಬದುಕುಳಿದಿರುವ ಘಟನೆ ಬರ್ಮಿಂಗ್ಹ್ಯಾಮ್ನ ಅಲಬಾಮಾದಲ್ಲಿ ನಡೆದಿದೆ.
ಕೇವಲ 21 ವಾರ (132 ದಿನಗಳಲ್ಲಿ)(Alabama boy born in 21 weeks) ಒಂದು ದಿನಕ್ಕೆ ಹೆರಿಗೆ ಆಗಿದ್ದು ಈ ವೇಳೆ ಮಗು ಕೇವಲ ಅರ್ಧ ಕೆಜಿ ತೂಕವಿತ್ತು. ಹೀಗಾಗಿ, ಮಗು ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ, ಮಗು ಇದೀಗ ಸಂಪೂರ್ಣವಾಗಿ ಆರೋಗ್ಯವಾಗಿದೆ ಎಂದು ಅಲ್ಲಿನ ಆಸ್ಪತ್ರೆ ಮಾಹಿತಿ ಹಂಚಿಕೊಂಡಿದೆ.
ವಿಶ್ವದ ಅತ್ಯಂತ ಅತಿ ಚಿಕ್ಕ (Premature Baby)ಸಮಯದಲ್ಲಿ ಜನಸಿರುವ ಮಗು ಇದಾಗಿದ್ದು, ಜುಲೈ 5, 2020ರಂದು ಕೇವಲ 132 ದಿನವಾಗಿದ್ದಾಗ ಅಕಾಲಿಕವಾಗಿ ಜನನವಾಗಿದೆ. ಸದ್ಯ ಆ ಮಗುವಿಗೆ 16 ತಿಂಗಳು ವಯಸ್ಸು. ಹೀಗಾಗಿ, ಗಿನ್ನಿಸ್ ರೆಕಾರ್ಡ್(Guinness World Records) ಬುಕ್ನಲ್ಲಿ ಮಗುವಿನ ಹೆಸರು ದಾಖಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ವೈದ್ಯರಾದ ಡಾ. ಬ್ರಿಯಾನ್ ಸಿಮ್ಸ್, ಅಂಕಿ-ಅಂಶಗಳ ಪ್ರಕಾರ ಚಿಕ್ಕ ವಯಸ್ಸಿನಲ್ಲಿ ಜನಿಸುವ ಮಕ್ಕಳು ವಾಸ್ತವಿಕವಾಗಿ ಬದುಕುಳಿಯುವ ಚಾನ್ಸ್ ತುಂಬಾ ಕಡಿಮೆ. ಆದರೆ, ಈ ಮಗು ಅದಕ್ಕೆ ವಿರೋಧವಾಗಿದೆ ಎಂದಿದ್ದಾರೆ.
ಮಗುವಿನ ಜನನವಾದಾಗಿನಿಂದಲೂ ಸುಮಾರು 275 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇದೀಗ ಡಿಸ್ಚಾರ್ಜ್ ಮಾಡಲಾಗಿದೆ. 40 ವಾರಗಳ ಭ್ರೂಣವನ್ನ ಪೂರ್ಣಾವದಿ ಎಂದು ಪರಿಗಣಿಸಲಾಗುತ್ತದೆ. ಆದರೆ, ಈ ಮಗು ಕೇವಲ 21 ವಾರಕ್ಕೆ ಜನನವಾಗಿದೆ.
ಹೀಗಾಗಿ, ಮೂರು ತಿಂಗಳ ಕಾಲ ವೆಂಟಿಲೇಟರ್ನಲ್ಲಿಡಲಾಗಿತ್ತು. ಮಗುವಿಗೆ ಈಗಲೂ ಫೀಡಿಂಗ್ ಟ್ಯೂಬ್ ಹಾಗೂ ಆಮ್ಲಜನಕದ ಅವಶ್ಯಕತೆ ಇದ್ದು, ವೈದ್ಯರು ಮೇಲಿಂದ ಮೇಲೆ ನಿಗಾ ಇಡಲಿದ್ದಾರೆಂದು ತಿಳಿದು ಬಂದಿದೆ.
ಸಾಮಾನ್ಯವಾಗಿ ಹುಟ್ಟುವ ಮಕ್ಕಳು ಹಾಗೂ ಈ ಮಗುವಿಗೂ ತುಂಬಾ ವ್ಯತ್ಯಾಸವಿದೆ. ಭವಿಷ್ಯದಲ್ಲಿ ಏನಾಗುತ್ತದೆ ಎಂಬುದು ನಮಗೆ ಗೊತ್ತಿಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.