ವಾಷಿಂಗ್ಟನ್(ಅಮೆರಿಕ): ಸುಮಾರು 3,000 ಮಂದಿ ಅಮೆರಿಕನ್ ಪ್ರಜೆಗಳು ಸ್ವಯಂಪ್ರೇರಿತವಾಗಿ ರಷ್ಯಾ ಪಡೆಗಳ ವಿರುದ್ಧ ಹೋರಾಡಲು ಉಕ್ರೇನ್ಗೆ ಧಾವಿಸಿದ್ದಾರೆ ಎಂದು ಅಮೆರಿಕದಲ್ಲಿರುವ ಉಕ್ರೇನ್ ರಾಯಭಾರ ಕಚೇರಿಯ ಪ್ರತಿನಿಧಿಯ ಹೇಳಿಕೆಯನ್ನು ಉಲ್ಲೇಖಿಸಿ, ಮಾಧ್ಯಮವೊಂದು ವರದಿ ಮಾಡಿದೆ.
ಉಕ್ರೇನ್ ರಾಯಭಾರ ಕಚೇರಿಯ ಪ್ರತಿನಿಧಿ VOA ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದು, ಅಮೆರಿಕದ ಸ್ವಯಂಸೇವಕರು ರಷ್ಯಾದ ಆಕ್ರಮಣಕಾರಿ ಪಡೆಗಳನ್ನು ವಿರೋಧಿಸಲು ಉಕ್ರೇನ್ ಮಾಡಿದ್ದ ಮನವಿಗೆ ಸ್ಪಂದಿಸಿದ್ದಾರೆ. ಆದ್ದರಿಂದ ಅವರು ರಷ್ಯಾ ವಿರುದ್ಧ ಹೋರಾಡಲು ಸನ್ನದ್ಧರಾಗಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಅಮೆರಿಕ ಮಾತ್ರವಲ್ಲದೇ ಇತರ ದೇಶಗಳಿಂದಲೂ ಸಾಕಷ್ಟು ಮಂದಿ ಉಕ್ರೇನ್ ಪರವಾಗಿ ಹೋರಾಡಲು ಮುಂದೆ ಬಂದಿದ್ದಾರೆ. ಜಾರ್ಜಿಯಾ ಮತ್ತು ಬೆಲಾರಸ್‌ನಂತಹ (ಈ ಮೊದಲು ಸೋವಿಯತ್ ಒಕ್ಕೂಟದಲ್ಲಿದ್ದ ರಾಷ್ಟ್ರಗಳು) ರಾಷ್ಟ್ರಗಳಿಂದಲೂ ಜನರು ಬರುತ್ತಿದ್ದಾರೆ ಎಂದು ರಾಯಭಾರ ಕಚೇರಿ ವಕ್ತಾರರು ಹೇಳಿದ್ದಾರೆ.
ಮಾರ್ಚ್ 3ರಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು 16 ಸಾವಿರ ವಿದೇಶಿ ಸ್ವಯಂಸೇವಕರಿರುವ 'ಅಂತಾರಾಷ್ಟ್ರೀಯ ಸೈನ್ಯ' ಘೋಷಣೆ ಮಾಡಿದ್ದರು. ಆ ನಂತರದಲ್ಲಿ ವಿವಿಧ ದೇಶಗಳಿಂದ ಪ್ರಜೆಗಳು ಉಕ್ರೇನ್ಗೆ ಬರುತ್ತಿದ್ದಾರೆ. ಉಕ್ರೇನ್, ಯೂರೋಪ್ ಮತ್ತು ಪ್ರಪಂಚದ ರಕ್ಷಣೆಗೆ ಜನರು ಸೈನ್ಯಕ್ಕೆ ಸೇರಬೇಕೆಂದು ರಾಯಭಾರ ಕಚೇರಿಯ ಪ್ರತಿನಿಧಿ ಮನವಿ ಮಾಡಿದ್ದಾರೆ ಎಂದು VOA ನ್ಯೂಸ್ ವರದಿಯಲ್ಲಿ ಉಲ್ಲೇಖಿಸಿದೆ.
ಇದನ್ನೂ ಓದಿ: ಉಕ್ರೇನ್ ಬಿಕ್ಕಟ್ಟು ಇಡೀ ವಿಶ್ವಕ್ಕೆ ಪರಿಣಾಮ ಬೀರಲಿದೆ, ಭಾರತ-ರಷ್ಯಾ ಸಂಬಂಧವೂ ಇದಕ್ಕೆ ಹೊರತಲ್ಲ: ರಷ್ಯಾ
ಈ ಮೊದಲು ನಮ್ಮ ಸ್ವಾತಂತ್ರ್ಯವನ್ನು ಹೊರತುಪಡಿಸಿ, ನಾವು ಕಳೆದುಕೊಳ್ಳಲು ಏನೂ ಇಲ್ಲ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿಕೊಂಡಿದ್ದರು. ವಿವಿಧ ದೇಶಗಳು ಉಕ್ರೇನ್ಗಾಗಿ ತಮ್ಮ ಸೈನ್ಯವನ್ನು ಕಳುಹಿಸುತ್ತಿಲ್ಲ. ಆದರೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿವೆ ಎಂದು ಬಿಬಿಸಿ ವರದಿ ಮಾಡಿತ್ತು.