ಮಾಸ್ಕೋ(ರಷ್ಯಾ): ರಷ್ಯಾದ ಗನ್ ಪೌಡರ್ ಕಾರ್ಖಾನೆಯೊಂದರಲ್ಲಿ ದಿಢೀರ್ ಸ್ಫೋಟ ಸಂಭವಿಸಿರುವ ಪರಿಣಾಮ 16 ಮಂದಿ ದುರ್ಮರಣಕ್ಕೀಡಾಗಿರುವ ಘಟನೆ ನಡೆದಿದೆ. ಸ್ಫೋಟ ಸ್ಥಳದಲ್ಲಿ ಈಗಾಗಲೇ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ. ಮಾಸ್ಕೋದ ಆಗ್ನೇಯಕ್ಕೆ 270 ಕಿಲೋ ಮೀಟರ್ ದೂರದ ರಯಾಜಾನ್ ಪ್ರದೇಶದ ಎಲಾಸ್ಟಿಕ್ ಕಾರ್ಖಾನೆಯಲ್ಲಿ ಈ ಅವಘಡ ನಡೆದಿದೆ.
ಇದನ್ನೂ ಓದಿರಿ: ನಿದ್ದೆಯಲ್ಲಿದ್ದಾಗ ಕುಸಿದ ಮನೆ: ಐವರು ಸಾವು, ಆರು ಮಂದಿ ಸ್ಥಿತಿ ಗಂಭೀರ
ಸ್ಫೋಟದಿಂದಾಗಿ ಏಳು ಜನರು ಸಾವನ್ನಪ್ಪಿ, 9 ಮಂದಿ ನಾಪತ್ತೆಯಾಗಿದ್ದಾರೆಂದು ಮೊದಲಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದರು. ಆದರೆ, ಇದರ ಬೆನ್ನಲ್ಲೇ ಅವರೆಲ್ಲರೂ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ಘೋಷಣೆ ಮಾಡಿದ್ದಾರೆ. ಘಟನೆಯಿಂದಾಗಿ ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಆತನಿಗೆ ಚಿಕಿತ್ಸೆ ಮುಂದುವರೆದಿದೆ.
ಸ್ಫೋಟ ಸಂಭವಿಸಿರುವ ಸ್ಥಳದಲ್ಲಿ 170 ಸಿಬ್ಬಂದಿ ಹಾಗೂ 50 ಅಗ್ನಿಶಾಮಕ ವಾಹನ ಬೆಂಕಿ ನಂದಿಸುವ ಕಾರ್ಯದಲ್ಲಿ ಮಗ್ನವಾಗಿದ್ದು, ಇದೀಗ ಹತೋಟಿಗೆ ಬಂದಿದೆ ಎಂದು ತಿಳಿಸಿದ್ದಾರೆ. ತಾಂತ್ರಿಕ ವೈಫಲ್ಯದಿಂದಾಗಿ ಈ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ.