ಇಸ್ಲಾಮಾಬಾದ್: 26/11 ಮುಂಬೈ ದಾಳಿಯ ರೂವಾರಿ ಹಾಗೂ ಲಷ್ಕರ್- ಇ -ತೊಯ್ಬಾ (ಎಲ್‌ಇಟಿ) ಕಮಾಂಡರ್ ಜಾಕಿ-ಉರ್-ರೆಹಮಾನ್ ಲಖ್ವಿಗೆ ಪಾಕಿಸ್ತಾನ್ ಕೋರ್ಟ್ 15 ವರ್ಷ ಜೈಲುಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ ಎಂದು ವರದಿಯಾಗಿದೆ.
ಭಯೋತ್ಪಾದನೆ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡಿರುವ ಆರೋಪದ ಮೇಲೆ ಲಖ್ವಿಯನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಭಯೋತ್ಪಾದನೆ ನಿಗ್ರಹ ವಿಭಾಗ (CTD) ಕಳೆದ ಕೆಲ ದಿನಗಳ ಹಿಂದೆ ಅರೆಸ್ಟ್ ಮಾಡಿತ್ತು. ಮುಂಬೈ ದಾಳಿ ಪ್ರಕರಣದಲ್ಲಿ ಬಂಧಿಯಾಗಿದ್ದ ಲಖ್ವಿ, 2015 ರಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದನು.
ಓದಿ: 26/11 ಮುಂಬೈ ದಾಳಿಯ ಪಾತಕಿ ಲಖ್ವಿ ಪಾಕಿಸ್ತಾನದಲ್ಲಿ ಅರೆಸ್ಟ್
2008ರ ನವೆಂಬರ್ 26 ರಂದು ಲಷ್ಕರ್- ಇ -ತೊಯ್ಬಾದ 10 ಮಂದಿ ಉಗ್ರರು ಮುಂಬೈನ 12 ಕಡೆ ದಾಳಿ ನಡೆಸಿದ್ದರು. ಘಟನೆಯಲ್ಲಿ 18 ಮಂದಿ ಭದ್ರತಾ ಸಿಬ್ಬಂದಿ ಸೇರಿದಂತೆ 166 ಜನರು ಮೃತಪಟ್ಟಿದ್ದರು. 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇದೇ ವೇಳೆ 9 ಉಗ್ರರನ್ನು ಭದ್ರತಾ ಪಡೆ ಹತ್ಯೆಗೈದಿದ್ದು, ಉಳಿದೊಬ್ಬ ಉಗ್ರ ಅಜ್ಮಲ್ ಅಮಿರ್ ಕಸಬ್ನನ್ನು ಸೆರೆ ಹಿಡಿದು 2012ರ ನವೆಂಬರ್ 21 ರಂದು ಗಲ್ಲಿಗೇರಿಸಲಾಗಿತ್ತು.
ಜಾಕಿ-ಉರ್-ರೆಹಮಾನ್ ಲಖ್ವಿ ಬಂಧನ ಮಾಡಿದ್ದ ಪಂಜಾಬ್ ಪ್ರಾಂತ್ಯದ ಭಯೋತ್ಪಾದನೆ ನಿಗ್ರಹ ವಿಭಾಗ ಇಂದು ಪಾಕಿಸ್ತಾನ್ ಕೋರ್ಟ್ ಮುಂದೆ ಹಾಜರು ಪಡಿಸಿತ್ತು. ಇದರ ವಿಚಾರಣೆ ನಡೆಸಿದ ಕೋರ್ಟ್ ಮಹತ್ವದ ಆದೇಶ ಹೊರಹಾಕಿದೆ.