ನವದೆಹಲಿ: ಕೊರೊನಾ ವೈರಸ್ ಭೀತಿಯಿಂದಾಗಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಅನ್ನು ಮೇ 3ರವರೆಗೆ ವಿಸ್ತರಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ನಡೆಯನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಸ್ವಾಗತಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾದ ಪ್ರಾದೇಶಿಕ ನಿರ್ದೇಶಕ ಡಾ.ಪೂನಂ ಖೇತ್ರಪಾಲ್ ಸಿಂಗ್ ಮಾತನಾಡಿ, ಪರಿಣಾಮಕಾರಿಯಾದ ಸಾಮಾಜಿಕ ಅಂತರವನ್ನು ಸುಲಭಗೊಳಿಸಲು ಆರು ವಾರಗಳ ರಾಷ್ಟ್ರವ್ಯಾಪಿ ಲಾಕ್‌ಡೌನ್ ಹಾಗೂ ಸಾರ್ವಜನಿಕ ಆರೋಗ್ಯ ಕ್ರಮಗಳ ವಿಸ್ತರಣೆಯು ಕೊರೊನಾ ವೈರಸ್ ವಿರುದ್ಧ ಹೋರಾಡಲು ಭಾರತಕ್ಕೆ ಅನುಕೂಲವಾಗಲಿದೆ ಎಂದಿದ್ದಾರೆ.
ಕೋವಿಡ್-19 ತಡೆಗಟ್ಟಲು ಭಾರತದ ಸಮಯೋಚಿತ ಮತ್ತು ಕಠಿಣ ನಿರ್ಧಾರ ಕೈಗೊಂಡಿದೆ. ಸಂಖ್ಯೆಯಲ್ಲಿನ ಫಲಿತಾಂಶಗಳ ಬಗ್ಗೆ ಮಾತನಾಡಲು ಈಗ ಸಾಧ್ಯವಿಲ್ಲ. ಆರು ವಾರಗಳ ರಾಷ್ಟ್ರೀಯ ಲಾಕ್‌ಡೌನ್ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕೊರೋನಾ ಸೋಂಕು ಪತ್ತೆ ಹಚ್ಚುವುದು, ಐಸೊಲೇಷನ್ ಗಳಂತಹ ಕ್ರಮಗಳೂ ಸಹ ದೀರ್ಘಾವಧಿಯಲ್ಲಿ ಕೊರೋನಾ ವಿರುದ್ಧದ ಹೋರಾಟಕ್ಕೆ ಸಹಕಾರಿಯಾಗಲಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ದೊಡ್ಡ ಸವಾಲುಗಳ ಹೊರತಾಗಿಯೂ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಭಾರತವು ಅಚಲವಾದ ಬದ್ಧತೆ ಪ್ರದರ್ಶಿಸುತ್ತಿದೆ. ಇಂತಹ ಸಂಕಷ್ಟದ ಸ್ಥಿತಿಯಲ್ಲಿ ಅಧಿಕಾರಿಗಳು, ಆರೋಗ್ಯ ಕಾರ್ಯಪಡೆಗೆ ಇರುವಷ್ಟೇ ಜವಾಬ್ದಾರಿ ಸಮುದಾಯಗಳಿಗೂ ಇದೆ. ಇದಕ್ಕೆ ಪ್ರತಿಯೊಬ್ಬರಿ ತಮ್ಮ ಅತ್ಯುತ್ತಮ ಕೊಡುಗೆ ನೀಡುವ ಮೂಲಕ ವೈರಸ್ ಅನ್ನು ಈ ಯುದ್ಧದಲ್ಲಿ ಸೋಲಿಸಬಹುದು ಎಂದರು.