ಕಾಬೂಲ್: ಅಫ್ಘಾನಿಸ್ತಾನ ತಾಲಿಬಾನ್ ಉಗ್ರರ ಕೈಸೇರಿದೆ. ಅಲ್ಲಿನ ಸರ್ಕಾರಿ ಕೆಲಸದಲ್ಲಿರುವ ಮಹಿಳೆಯರು ಹಾಗು ದೇಶದ ಇತರೆ ಮಹಿಳೆಯರು ಭಯದಲ್ಲೇ ಬದುಕು ಸಾಗಿಸುತ್ತಿದ್ದಾರೆ. ತಾಲಿಬಾನ್ ಉಗ್ರರು ರಾಜಧಾನಿ ಕಾಬೂಲ್ಗೆ ಪ್ರವೇಶಿಸುತ್ತಿದ್ದಂತೆ ದೇಶ ಬಿಟ್ಟು ಪಲಾಯನಗೈದಿರುವ ಅಶ್ರಫ್ ಘನಿ ನೇತೃತ್ವದ ಸರ್ಕಾರದಲ್ಲಿ ಹಲವು ಮಂದಿ ಮಹಿಳಾ ಅಧಿಕಾರಿಗಳು ಕೆಲಸ ನಿರ್ವಹಿಸುತ್ತಿದ್ದರು. ಅವರೆಲ್ಲರೂ, ಈಗ ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಳೆದ ವಾರದವರೆಗೆ ಎರಡು ವರ್ಷಗಳಿಂದ ಅಫ್ಘಾನ್ ಸರ್ಕಾರಿ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಮಹಿಳಾ ಅಧಿಕಾರಿಯೊಬ್ಬರನ್ನು ಬಿಬಿಸಿ ಮಾಧ್ಯಮ ಸಂಸ್ಥೆ ಮಾತನಾಡಿಸಿತು. ತಾಲಿಬಾನ್ ದೇಶವನ್ನು ವಶಪಡಿಸಿಕೊಳ್ಳುತ್ತಿದ್ದಂತೆ ಆಕೆಗೆ ಆದ ಅನುಭವ ಮತ್ತು ಭವಿಷ್ಯದ ಬಗ್ಗೆ ಇರುವ ಆತಂಕದ ಬಗ್ಗೆ ಆ ಮಹಿಳಾ ಅಧಿಕಾರಿ ಹೇಳಿಕೊಂಡಿದ್ದಾರೆ.
'ಭಾನುವಾರ ನನ್ನ ಜೀವನದಲ್ಲೇ ಅತ್ಯಂತ ಘೋರ ದಿನ'
ಭಾನುವಾರ (ಆಗಸ್ಟ್ -15) ನನ್ನ ಜೀವನದಲ್ಲಿ ಅತ್ಯಂತ ಘೋರವಾದ ದಿನವಾಗಿತ್ತು. ನಾನು ಎಂದಿನಂತೆ ಬೆಳಗ್ಗೆ ಕಚೇರಿಗೆ ಹೋದೆ. ಆ ವೇಳೆ ಗೇಟ್ ಬಳಿ ಒಬ್ಬರೂ ಮಾತ್ರ ಮಹಿಳಾ ಭದ್ರತಾ ಸಿಬ್ಬಂದಿ ಇದ್ದರು. ನಮ್ಮ ಕಚೇರಿ ಎಂದಿನಂತಿರಲಿಲ್ಲ, ಅಲ್ಲಿ ಕೆಲವೇ ಕೆಲವು ಜನರು ಮಾತ್ರ ಓಡಾಡುತ್ತಿದ್ದರು. ಅಷ್ಟೊತ್ತಿಗೆ ತಾಲಿಬಾನಿಗಳು ರಾಜಧಾನಿ ಕಾಬೂಲ್ನ ಗಡಿ ತಲುಪಿದ್ದರು. ಇದರಿಂದ ಜನರು ಭಯಬೀತರಾಗಿದ್ದರು. ಆದರೆ, ಯಾರೂ ಕೂಡ ಅವರು ಒಳಗೆ ಪ್ರವೇಶಿಸುತ್ತಾರೆ ಎಂದುಕೊಂಡಿರಲಿಲ್ಲ.
ಮಧ್ಯಾಹ್ನದ ಸಮಯ ನಾನು ಕಚೇರಿಯಿಂದ ಹೊರಟೆ. ನನ್ನ ಮೊಬೈಲ್ ಫೋನ್ ಚಾರ್ಜರ್ ಮತ್ತು ಕೆಲವು ವೈಯಕ್ತಿಕ ದಾಖಲೆಗಳನ್ನು ತೆಗೆದುಕೊಂಡೆ. ಪ್ರತಿಯೊಬ್ಬರೂ ತಮ್ಮಿಂದ ಸಾಧ್ಯವಾದಷ್ಟು ಹಣವನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದರಿಂದ ನಾನೂ ಸ್ವಲ್ಪ ಹಣ ವಿತ್ ಡ್ರಾ ಮಾಡಲು ಬ್ಯಾಂಕ್‌ಗೆ ಹೋದೆ. ಆದರೆ ಅಲ್ಲಿ ಕ್ಯೂ ಬಹಳ ದೊಡ್ಡದಿತ್ತು, ಪರಿಸ್ಥಿತಿ ತೀವ್ರವಾಗಿತ್ತು.
ನಾನು ಬ್ಯಾಂಕ್‌ಗೆ ಪ್ರವೇಶಿಸಿದಾಗ, ನನ್ನ ತಾಯಿ, ಸಹೋದರಿ ಮತ್ತು ಸಹೋದರರಿಂದ ಮಿಸ್ಡ್ ಕಾಲ್ ಬಂದಿರುವುದನ್ನು ಗಮನಿಸಿದೆ. ಏನೋ ಸಂಭವಿಸಿರಬಹುದು ಎಂದು ನನಗೆ ಭಯವಾಯಿತು. ನಾನು ನನ್ನ ತಾಯಿಗೆ ಕರೆ ಮಾಡಿದೆ ಮತ್ತು ಅವಳು ತುಂಬಾ ಆತಂಕದಿಂದ ನೀನು ಎಲ್ಲಿದ್ದಿ, ಏನು ಮಾಡುತ್ತಿದ್ದಿ ಎಂದೆಲ್ಲಾ ಧಾವಂತದಲ್ಲಿ ಒಂದೇ ಸಮನೆ ಕೇಳಿದಳು. ತಾಲಿಬಾನಿಗಳು ನಗರದ ಪಶ್ಚಿಮದಲ್ಲಿ ಇರುವುದರಿಂದ ಆದಷ್ಟು ಬೇಗ ಮನೆಗೆ ಓಡಿ ಬಾ ಎಂದು ಅಮ್ಮ ನನಗೆ ಹೇಳಿದಳು.
'ನನ್ನ ಬಟ್ಟೆ ನೋಡಿ ಕೊಲ್ಲಬಹುದೆಂದು ಭಯವಾಗಿತ್ತು'
ಎಲ್ಲರೂ ಗುರಿ ಕಾಣದೆ ಸಿಕ್ಕ ಸಿಕ್ಕ ಕಡೆಗಳಲ್ಲಿ ಓಡುತ್ತಿದ್ದರು, ಅಂಗಡಿಯವರು ಬಾಗಿಲು ಮುಚ್ಚುತ್ತಿದ್ದರು ಮತ್ತು ಎಲ್ಲರೂ ಮನೆಗೆ ಹೋಗಲು ಪ್ರಯತ್ನಿಸುತ್ತಿದ್ದರು. ನನ್ನ ಸಹೋದರ ನನ್ನನ್ನು ಕರೆದುಕೊಂಡು ಹೋಗುವುದಾಗಿ ಹೇಳಿದನು. ಆದರೆ ರಸ್ತೆಗಳು ಟ್ರಾಫಿಕ್ ಜಾಮ್ನಿಂದ ಬಂದ್ ಆಗಿತ್ತು.
ನಾನು ನಡೆಯಲು ಪ್ರಾರಂಭಿಸಿದೆ, ಟ್ಯಾಕ್ಸಿಯನ್ನು ಹುಡುಕಲು ಪ್ರಯತ್ನಿಸಿದೆ. ದಾರಿಯಲ್ಲಿ, ಜನರು ಗುಂಪು ಗುಂಪಾಗಿ ಓಡುತ್ತಿರುವುದನ್ನು ಕಂಡೆ. ತಾಲಿಬಾನಿಗಳು ಎಲ್ಲಿ ನನ್ನನ್ನು ನಡು ದಾರಿಯಲ್ಲೇ ಹಿಡಿದು ಕೊಲ್ಲುವರೋ ಎಂಬ ಭಯ ನನ್ನದಾಗಿತ್ತು. ಯಾಕೆಂದರೆ ನಾನು ನನ್ನ ಕಚೇರಿಯ ಬಟ್ಟೆ ಧರಿಸಿಕೊಂಡಿದ್ದೆ. ಅದು ಅವರಿಗೆ ಹಿಡಿಸುವುದಿಲ್ಲ. ಹಾಗಾಗಿ, ಅವರು ನನ್ನನ್ನು ಕೊಲ್ಲುತ್ತಾರೆ ಎಂದು ನನಗೆ ಭಯವಾಗಿತ್ತು. ಸುಮಾರು ಎರಡು ಗಂಟೆಗಳ ನಂತರ ಅಂತಿಮವಾಗಿ ನನ್ನ ಮನೆ ತಲುಪಿದೆ. ನನ್ನ ಕುಟುಂಬದೊಂದಿಗೆ ಮಾತನಾಡಲು ಸಾಧ್ಯವಾಗದಷ್ಟು ತಲ್ಲಣಗೊಂಡಿದ್ದೆ. ಹಾಗಾಗಿ, ಅದು ನನಗೆ ಎಂದಿಗೂ ಮರೆಯಲಾಗದ ದಿನವಾಗಿತ್ತು. ಅಂದು ರಾತ್ರಿಯಿಡೀ ನನ್ನ ಮನಸ್ಸಿನಲ್ಲಿ ಭಯ ಆವರಿಸಿತ್ತು. ಯಾರಾದರೂ ನಮ್ಮ ಮನೆಯ ಬಾಗಿಲನ್ನು ತಟ್ಟಬಹುದು ಎಂದು ಭಯ ಇತ್ತು.
'ಎಷ್ಟೇ ಭರವಸೆ ಕೊಟ್ಟರೂ, ತಾಲಿಬಾನ್ಗಳನ್ನು ನಂಬಲು ಸಾಧ್ಯವಿಲ್ಲ'
ಅಂದಿನಿಂದ ಎಲ್ಲರೂ ತಾವು ಎಲ್ಲಿ ಅಡಗಿಕೊಳ್ಳಬಹುದು ಎಂದು ಹುಡುಕುತ್ತಿದ್ದರು. ನಾನು ಸಂಬಂಧಿಕರ ಮನೆಗೆ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಆದರೆ, ದಾರಿಯಲ್ಲಿ ಸಿಕ್ಕಿಬಿದ್ದಲ್ಲಿ ಏನು ಕಥೆ? ಎಂದು ಭಯವಾಗ್ತಿದೆ. ನಾನೀಗ ಮನೆಯಲ್ಲಿ ಸುರಕ್ಷಿತವಾಗಿದ್ದೇನೆ. ಅವರು ನಮ್ಮ ಮನೆಗೆ ಬಂದರೆ? ಯಾಕೆಂದರೆ ನಾವು ಸರ್ಕಾರಕ್ಕಾಗಿ ಕೆಲಸ ಮಾಡಿದವರು. ತಾಲಿಬಾನ್ ಹೋರಾಟಗಾರರು ಜನರ ಮನೆಗಳಿಗೆ ಪ್ರವೇಶಿಸುವುದಿಲ್ಲ ಎಂದು ಹೇಳಿದ್ದಾರೆ. ಆದರೆ ನಾವು ಅವರನ್ನು ನಂಬಲು ಸಾಧ್ಯವಿಲ್ಲ. ಅವರನ್ನು ಟಿವಿಯಲ್ಲಿ ನೋಡಿದಾಗ ನನಗೆ ಭಯವಾಗುತ್ತಿದೆ, ನನಗೆ ತುಂಬಾ ದುಃಖವಾಗುತ್ತಿದೆ ಎಂದು ಮಹಿಳಾಧಿಕಾರಿ ತೀವ್ರ ಆತಂಕ ವ್ಯಕ್ತಪಡಿಸಿದರು.