ಟೋಕಿಯೋ(ಜಪಾನ್) : ದಿನೇ ದಿನೇ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇದ್ದು, ಮನುಷ್ಯರ ಬದುಕನ್ನು ಸುಲಭವಾಗಿಸುತ್ತಿವೆ. ತಾಂತ್ರಿಕ ಪ್ರಗತಿಗೆ ಅನುಗುಣವಾಗಿ, ಸೋನಿ ಕಂಪನಿಯು REON POCKET ಎಂಬ ಧರಿಸಬಹುದಾದ ಹವಾನಿಯಂತ್ರಣವನ್ನು ಅಭಿವೃದ್ಧಿಪಡಿಸಿದ್ದು, ಇದು ಹೆಚ್ಚುತ್ತಿರುವ ತಾಪಮಾನದಲ್ಲಿ ನಿಮ್ಮನ್ನು ತಂಪಾಗಿರಿಸುತ್ತದೆ ಎಂದು ಟೆಕ್ಜೆನಿಜ್ ವರದಿ ಮಾಡಿದೆ.
'ಧರಿಸಬಹುದಾದ ಎಸಿ' ಅಂದರೆ ಅದು ಕೇವಲ ಒಂದು ಕಲ್ಪನೆಯಲ್ಲ! ಏಕೆಂದರೆ ಬೇಸಿಗೆಯಲ್ಲಿ ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಸೋನಿ ಕಂಪನಿಯು ಅಂತಹ ಸಾಧನಕ್ಕಾಗಿಯೇ ಕ್ರೌಡ್‌ಫಂಡಿಂಗ್ (ಹೆಚ್ಚಿನ ಸಂಖ್ಯೆಯ ಜನರಿಂದ, ಅದರಲ್ಲೂ ಸಾಮಾನ್ಯವಾಗಿ ಇಂಟರ್ನೆಟ್ ಮೂಲಕ ಸಣ್ಣ ಪ್ರಮಾಣದ ಹಣ ಸಂಗ್ರಹಿಸಿ ಮಾಡುವ ಯೋಜನೆ ಅಥವಾ ಉದ್ಯಮಕ್ಕೆ ಧನಸಹಾಯ ನೀಡುವ ಕಾರ್ಯ) ಯೋಜನೆಯನ್ನು ಪ್ರಾರಂಭಿಸಿದೆ.

ಸೋನಿ ರಿಯಾನ್ ಪಾಕೆಟ್ ಒಂದು ಹೊಸ ಸಾಧನವಾಗಿದ್ದು, ಇದು ಬೇಸಿಗೆಯ ತಾಪದಿಂದ ಮಾತ್ರವಲ್ಲದೆ ಚಳಿಗಾಲದ ಮೈಕೊರೆಯುವ ಚಳಿಗೂ ಪರಿಹಾರ ನೀಡಲಿದೆ. ಇದು ಒಳ ಮತ್ತು ಹೊರ ಉಡುಪು ಎರಡರಲ್ಲೂ ಧರಿಸಬಹುದಾದ ಸಾಧನವಾಗಿದ್ದು, ಇದನ್ನು ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಯಂತ್ರಿಸಬಹುದಾಗಿದೆ.
ಈ ಪಾಕೆಟ್ ಗಾತ್ರದ ಸಾಧನವನ್ನು ಸಣ್ಣ ಚೀಲದಲ್ಲಿ ಇಡಬಹುದು ಅಥವಾ ಹಿಂಭಾಗದಲ್ಲಿ ಅಥವಾ ಕುತ್ತಿಗೆಯಲ್ಲಿ ಮೀಸಲಾದ ಒಳ ಉಡುಪುಗಳಲ್ಲಿ ಧರಿಸಬಹುದು. ಸ್ಮಾರ್ಟ್‌ಫೋನ್ ಮೂಲಕ ಇದಕ್ಕೆ ಮೀಸಲಾದ ಅಪ್ಲಿಕೇಶನ್‌ನೊಂದಿಗೆ ಬಳಸಬಹುದು ಹಾಗೂ ಅಗತ್ಯಕ್ಕೆ ಅನುಗುಣವಾಗಿ ಮೊಬೈಲ್ ಫೋನ್ ಮೂಲಕ ತಾಪಮಾನವನ್ನೂ ನಿಯಂತ್ರಿಸಬಹುದು. ಸದ್ಯಕ್ಕೆ ಪುರುಷರ S, M ಮತ್ತು L ಗಾತ್ರದ ಒಳ ಉಡುಪುಗಳಲ್ಲಿ ಮಾತ್ರ ಇದನ್ನು ಧರಿಸಬಹುದಾಗಿದೆ.
ಲೀಥಿಯಂ-ಐಯಾನ್ ಬ್ಯಾಟರಿ ಚಾಲಿತ ಸಾಧನವಾಗಿದ್ದರಿಂದ ಇದು ಇನ್ನಷ್ಟು ಗ್ರಾಹಕ-ಸ್ನೇಹಿಯಾಗಿದೆ. ಕೇವಲ ಎರಡು ಗಂಟೆ ಚಾರ್ಚ್ ಮಾಡಿದರೆ ದಿನ ಪೂರ್ತಿ ಬಳಕೆಯಾಗಲಿದೆ.