ಯಾಂಗೊನ್ (ಮ್ಯಾನ್ಮಾರ್): ಮ್ಯಾನ್ಮಾರ್ ದಂಗೆಯಲ್ಲಿ ನಿನ್ನೆ ಒಂದೇ ದಿನ 38 ಜನರು ಸಾವನ್ನಪ್ಪಿದ್ದು, ಮಾರಣಾಂತಿಕ ಹಿಂಸಾಚಾರವು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ ಎಂದು ವಿಶ್ವಸಂಸ್ಥೆ ಅಧಿಕಾರಿಯೊಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ.
ಮ್ಯಾನ್ಮಾರ್ ಭದ್ರತಾ ಪಡೆಗಳು ಪ್ರತಿಭಟನಾಕಾರರ ಮೇಲೆ ಸ್ಲಿಂಗ್ಶಾಟ್ಗಳನ್ನು ಹಾರಿಸುವುದು, ಅವರನ್ನು ಬೆನ್ನಟ್ಟುವುದು ಮತ್ತು ಆಂಬ್ಯುಲೆನ್ಸ್ ಸಿಬ್ಬಂದಿಗೆ ಕ್ರೂರವಾಗಿ ಹೊಡೆದಿರುವುದು ಕೂಡಾ ಕಂಡುಬಂದಿದೆ. ಮಿಲಿಟರಿ ದಂಗೆಯ ವಿರುದ್ಧ ನಡೆದ ಪ್ರತಿಭಟನೆ ಹಾಗೂ ಹಿಂಸಾಚಾರದ ಕುರಿತು ತೋರಿಸುವ ವಿಡಿಯೊದಲ್ಲಿ ಇದು ಕಂಡುಬಂದಿದೆ.
ದಂಗೆ ಪ್ರಾರಂಭವಾದಾಗಿನಿಂದ ಈವರೆಗೆ 50ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ ಎಂದು ಮ್ಯಾನ್ಮಾರ್‌ನ ಯುಎನ್ ವಿಶೇಷ ರಾಯಭಾರಿ ಕ್ರಿಸ್ಟೀನ್ ಸ್ಕ್ರಾನರ್ ಬರ್ಗೆನರ್ ತಿಳಿಸಿದ್ದಾರೆ.
ಮಿಲಿಟರಿ ಅಧಿಕಾರಿಗಳು ನಾಯಕಿ ಆಂಗ್ ಸಾನ್ ಸೂಕಿ ಅವರ ಚುನಾಯಿತ ಸರ್ಕಾರವನ್ನು ಉಚ್ಚಾಟಿಸಿದಾಗಿನಿಂದ ಪ್ರತಿಭಟನಾಕಾರರು ದೇಶಾದ್ಯಂತ ಬೀದಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಜನಸಮೂಹವನ್ನು ಚದುರಿಸಲು ಭದ್ರತಾ ಪಡೆಗಳು ಪದೇ ಪದೆ ಅಶ್ರುವಾಯು ಮತ್ತು ರಬ್ಬರ್ ಗುಂಡುಗಳನ್ನು ಹಾರಿಸುತ್ತಿದ್ದು, ಪ್ರತಿಭಟನಾಕಾರರನ್ನು ಸಾಮೂಹಿಕವಾಗಿ ಬಂಧಿಸುತ್ತಿದ್ದಾರೆ.