ದೋಹಾ(ಕತಾರ್): ಅಫ್ಘಾನಿಸ್ತಾನದಲ್ಲಿ ಸಲ್ಮಾ ಅಣೆಕಟ್ಟು, ರಸ್ತೆಗಳು ಮತ್ತು ಇತರ ಮೂಲಸೌಕರ್ಯ ಯೋಜನೆಗಳನ್ನು ನಿರ್ಮಿಸಿರುವ ಭಾರತದ ಮಾನವೀಯ ಮತ್ತು ಅಭಿವೃದ್ಧಿ ಪ್ರಯತ್ನಗಳನ್ನು ತಾಲಿಬಾನ್ ಶ್ಲಾಘಿಸಿದ್ದು, ಅಫ್ಘಾನಿಸ್ತಾನ ಸರ್ಕಾರಕ್ಕೆ ಮಿಲಿಟರಿ ಸಹಕಾರ ನೀಡಬಾರದೆಂದು ಭಾರತವನ್ನು ಒತ್ತಾಯಿಸಿದೆ.
ಕತಾರ್ ಮೂಲದ ತಾಲಿಬಾನ್ ವಕ್ತಾರ ಸುಹೈಲ್ ಶಾಹೀನ್ ಎಎನ್ಐನೊಂದಿಗೆ ಮಾತನಾಡಿದ್ದು, ಅವರು (ಭಾರತ) ಅಫ್ಘಾನಿಸ್ತಾನಕ್ಕೆ ಮಿಲಿಟರಿ ಸಹಕಾರ ನೀಡಿದರೆ ಅದು ಅವರಿಗೆ ಒಳ್ಳೆಯದಲ್ಲ ಎಂದೇ ಭಾವಿಸುತ್ತೇನೆ. ಅಫ್ಘಾನಿಸ್ತಾನದಲ್ಲಿ ಮಿಲಿಟರಿ ನಿಯೋಜನೆ ಮಾಡಲು ಬಂದ ದೇಶಗಳ ಸ್ಥಿತಿ ಏನಾಗಿದೆ ಎಂಬುದು ತೆರೆದ ಪುಸ್ತಕ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಫ್ಘಾನಿಸ್ತಾನದ ಜನರಿಗೆ ಅಣೆಕಟ್ಟುಗಳು, ರಾಷ್ಟ್ರೀಯ ಯೋಜನೆಗಳು, ಮೂಲಸೌಕರ್ಯಗಳು ಮತ್ತು ಅಫ್ಘಾನಿಸ್ತಾನದ ಅಭಿವೃದ್ಧಿಗೆ, ಅದರ ಪುನರ್ನಿರ್ಮಾಣಕ್ಕಾಗಿ, ಆರ್ಥಿಕ ಏಳಿಗೆಗಾಗಿ ಮತ್ತು ಅಫ್ಘಾನಿಸ್ತಾನದ ಜನರಿಗಾಗಿ ಭಾರತ ಸರ್ಕಾರ ಮಾಡಿದ ಎಲ್ಲವನ್ನೂ ನಾವು ಪ್ರಶಂಸಿಸುತ್ತೇವೆ ಎಂದು ಶಾಹೀನ್ ಹೇಳಿದ್ದಾರೆ.
ಆಫ್ಘನ್ ಪಡೆಗಳು ಮತ್ತು ತಾಲಿಬಾನ್ ನಡುವೆ ಹಿಂಸಾಚಾರ ಹೆಚ್ಚಾಗಬಹುದೆಂಬ ಭಯದಿಂದ, ಭಾರತ ಮತ್ತು ಅಮೆರಿಕ ಸೇರಿದಂತೆ ಹಲವು ದೇಶಗಳು ತಾಲಿಬಾನ್ ಅಡಿಯಲ್ಲಿ ಬಂದ ಪ್ರಾಂತ್ಯಗಳಲ್ಲಿರುವ ರಾಯಭಾರ ಕಚೇರಿಗಳು, ಸಿಬ್ಬಂದಿಯನ್ನು ಸ್ಥಳಾಂತರ ಮಾಡಿವೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾಹೀನ್ ರಾಜತಾಂತ್ರಿಕರು ಮತ್ತು ರಾಯಭಾರ ಕಚೇರಿಗಳಿಗೆ ನಮ್ಮಿಂದ ಯಾವುದೇ ಅಪಾಯವಿಲ್ಲ ಎಂಬ ಭರವಸೆ ನೀಡುತ್ತೇವೆ. ನಮ್ಮ ಬಗ್ಗೆ, ನಮ್ಮ ನಿಲುವಿನ ಬಗ್ಗೆ ನಮಗೆ ವಿಶ್ವಾಸವಿದೆ. ನಾವು ಯಾವುದೇ ರಾಜತಾಂತ್ರಿಕ ಅಥವಾ ರಾಯಭಾರ ಕಚೇರಿ ಗುರಿಯಾಗಿಸಿಲ್ಲ ಎಂದು ಸುಹೇಲ್ ಶಾಹೀನ್ ಸ್ಪಷ್ಟನೆ ನೀಡಿದ್ದಾರೆ.
ಅಫ್ಘಾನಿಸ್ತಾನದಲ್ಲಿ ವಾಸಿಸುವ ಹಿಂದೂಗಳು ಮತ್ತು ಸಿಖ್ಖರ ರಕ್ಷಣೆ ಕುರಿತು ಎಎನ್ಐ ಪ್ರಶ್ನಿಸಿದ್ದು, ನಿರ್ದಿಷ್ಟವಾಗಿ ಪಾಕ್ತಿಯಾ ಪ್ರಾಂತ್ಯದ ಗುರುದ್ವಾರದಲ್ಲಿ ಸಿಖ್ ಧಾರ್ಮಿಕ ಧ್ವಜವನ್ನು ಕೆಳಗಿಳಿಸಿದ ಘಟನೆಯ ಕುರಿತು ಪ್ರಶ್ನಿಸಿದಾಗ ಸಿಖ್ ಸಮುದಾಯವೇ ಆ ಧ್ವಜವನ್ನು ತೆಗೆದಿದೆ ಎಂದು ಶಾಹೀನ್ ಪ್ರತ್ಯುತ್ತರ ನೀಡಿದ್ದಾರೆ ಜೊತೆಗೆ ತಮ್ಮ ತಮ್ಮ ಧಾರ್ಮಿಕ ಆಚರಣೆಗಳನ್ನು ತಾವು ಮಾಡಬಹುದು ಎಂದು ಸ್ಪಷ್ಟನೆ ನೀಡಿದ್ದಾರೆ.
ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳು ತಾಲಿಬಾನ್ನೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಶಾಹೀನ್ ಇದೊಂದು ರಾಜಕೀಯ ಪ್ರೇರಿತ ಹೇಳಿಕೆ ಮತ್ತು ಆಧಾರ ರಹಿತ ಎಂದಿದ್ದಾರೆ.
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರನ ಬಂಧನ