ಹೆರಾತ್(ಅಫ್ಘಾನಿಸ್ತಾನ): ಪಶ್ಚಿಮ ಅಫ್ಘಾನಿಸ್ತಾನದ ಹೆರಾತ್ ಪ್ರಾಂತ್ಯದಲ್ಲಿ ತಾಲಿಬಾನ್ ಉಗ್ರರು ಮತ್ತು ಸಶಸ್ತ್ರ ಗುಂಪಿನ ನಡುವೆ ಗುಂಡಿನ ಕಾಳಗ ನಡೆದಿದ್ದು, ಸುಮಾರು ಹದಿನೇಳು ಜನರು ಸಾವನ್ನಪ್ಪಿರುವುದು ವರದಿಯಾಗಿದೆ.
ಏಳು ಮಕ್ಕಳು, ಮೂವರು ಮಹಿಳೆಯರು ಮತ್ತು ಏಳು ವ್ಯಕ್ತಿಗಳು ಸೇರಿದಂತೆ 17 ಜನರ ಮೃತದೇಹಗಳನ್ನು ಹೆರಾತ್ ಪ್ರಾಂತ್ಯದ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಅವರೆಲ್ಲರೂ ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಅಫ್ಘಾನ್ ಅಧಿಕಾರಿಗಳ ಪ್ರಕಾರ, ಅಪಹರಣಗಳಲ್ಲಿ ಭಾಗಿಯಾಗಿರುವ ಅಪರಾಧಿಗಳ ವಿರುದ್ಧ ತಾಲಿಬಾನ್ ಭಾನುವಾರ ಹೆರಾತ್‌ನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಕನಿಷ್ಠ ಮೂವರನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆಗಸ್ಟ್ 15 ರಂದು ರಾಜಧಾನಿ ಕಾಬೂಲ್ ಅನ್ನು ವಶಪಡಿಸಿಕೊಂಡ ನಂತರ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೆ ಬಂದಿದೆ. ಇದು ಹಿಂದಿನ ನಾಗರಿಕ ಸರ್ಕಾರದ ಪತನಕ್ಕೆ ಕಾರಣವಾಯಿತು.