ಕೊಲಂಬೊ(ಶ್ರೀಲಂಕಾ): ನೆರೆಯ ರಾಷ್ಟ್ರ ಶ್ರೀಲಂಕಾ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಆಹಾರ ಪದಾರ್ಥಗಳ ಕೊರತೆ ನಡುವೆಯೇ ಇಂಧನ ಕೊರತೆಯೂ ಶ್ರೀಲಂಕಾದಲ್ಲಿ ಕಾಣಿಸಿಕೊಂಡಿದ್ದು, ಸರ್ಕಾರಿ ಸ್ವಾಮ್ಯದ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್ ನಡೆಸುತ್ತಿರುವ ಎಲ್ಲಾ ಇಂಧನ ಕೇಂದ್ರಗಳಲ್ಲಿ ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪೆಟ್ರೋಲ್ ಬಂಕ್ಗಳ ಬಳಿ ದೀರ್ಘವಾದ ಸರತಿ ಸಾಲುಗಳು ಸೃಷ್ಟಿಯಾಗಿವೆ.
ಫಿಲ್ಲಿಂಗ್ ಸ್ಟೇಷನ್‌ಗಳಲ್ಲಿ ಗ್ರಾಹಕರ ಸುರಕ್ಷತೆಗಾಗಿ ಮತ್ತು ಕಾನೂನು, ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಸೇನಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ ಎಂದು ಮಿಲಿಟರಿ ವಕ್ತಾರ ನಿಲಂತ ಪ್ರೇಮರತ್ನ ಹೇಳಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಪ್ರತಿ ಇಂಧನ ಕೇಂದ್ರದಲ್ಲಿ ಕನಿಷ್ಠ ಇಬ್ಬರನ್ನು ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ.
ಸುಮಾರು ದಿನಗಳಿಂದ ಇಂಧನ ಕೊರತೆ ಶ್ರೀಲಂಕಾವನ್ನು ಕಾಡುತ್ತಿದೆ. ಕೆಲವು ದಿನಗಳಿಂದ ಇಂಧನಕ್ಕಾಗಿ ಸರತಿ ಸಾಲಿನಲ್ಲಿ ನಿಂತು ಓರ್ವ ವ್ಯಕ್ತಿ ಸಾವನ್ನಪ್ಪಿದ್ದನು. ಇನ್ನೂ ಕೆಲವೆಡೆ ಸರತಿ ಸಾಲಿನಲ್ಲಿ ನಿಂತಿದ್ದ ವೇಳೆ ಮಾತಿನ ಚಕಮಕಿ ನಡೆದು, ಉಂಟಾದ ಜಗಳದಲ್ಲಿ ಮೂವರು ಸಾವನ್ನಪ್ಪಿ, ಉದ್ವಿಗ್ನತೆ ಉಂಟಾಗಿತ್ತು. ಇದನ್ನು ತಡೆಯಲು ಸೇನೆಯನ್ನು ನಿಯೋಜನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇಂಧನವನ್ನು ಸಾಕಷ್ಟು ಪ್ರಮಾಣದಲ್ಲಿ ವಿತರಿಸಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ. ವಿದೇಶಿ ವಿನಿಮಯ ಬಿಕ್ಕಟ್ಟಿನಿಂದಾಗಿ ಶ್ರೀಲಂಕಾ ಇಂಧನ ಕೊರತೆಯನ್ನು ಎದುರಿಸುತ್ತಿದೆ. ಕೆಲವು ರಾಷ್ಟ್ರಗಳಿಂದ ನೆರವನ್ನು ಪಡೆಯುವ ಮೂಲಕ ಸಮಸ್ಯೆಯನ್ನು ಪರಿಹರಿಸುವುದಾಗಿ ಸರ್ಕಾರ ಹೇಳಿಕೊಂಡಿದೆ.
ಇದನ್ನೂ ಓದಿ: ವಿಶ್ವದ 100 ಕಲುಷಿತ ನಗರಗಳಲ್ಲಿ ಭಾರತದ್ದೇ ಸಿಂಹಪಾಲು- ವರದಿ