ಕೊಲಂಬೋ(ಶ್ರೀಲಂಕಾ): ದಿನದಿಂದ ದಿನಕ್ಕೆ ಶ್ರೀಲಂಕಾದಲ್ಲಿ ಆಹಾರೋತ್ಪನ್ನಗಳ ಬೆಲೆ ಏರಿಕೆ ಕಾಣುತ್ತಿದೆ. ಅಲ್ಲಿನ ಕರೆನ್ಸಿ ಮೌಲ್ಯ ಭಾರಿ ಪ್ರಮಾಣದಲ್ಲಿ ಕುಸಿತ ಕಂಡ ಹಿನ್ನೆಲೆಯಲ್ಲಿ ಆಹಾರೋತ್ಪನ್ನಗಳ ಬೆಲೆ ಹೆಚ್ಚಾಗಿದ್ದು, ಇದನ್ನು ತಡೆಯುವ ಸಲುವಾಗಿ ಅಲ್ಲಿನ ಸರ್ಕಾರ ಆರ್ಥಿಕ ತುರ್ತುಸ್ಥಿತಿಯನ್ನು ಘೋಷಿಸಿದೆ.
ಅಕ್ಕಿ ಮತ್ತು ಸಕ್ಕರೆ ಸೇರಿದಂತೆ ಇತರ ಮೂಲಭೂತ ಆಹಾರ ಪದಾರ್ಥಗಳ ಪೂರೈಕೆಯನ್ನು ನಿಯಂತ್ರಿಸುವ ಸಲುವಾಗಿ ಆರ್ಥಿಕ ತುರ್ತು ಪರಿಸ್ಥಿತಿಯನ್ನು ಹೇರಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದು, ಈ ಮೂಲಕ ಹಣದುಬ್ಬರವನ್ನು ನಿಯಂತ್ರಿಸುವ ಕೆಲಸ ಮಾಡಲಾಗುತ್ತದೆ.
ಅಮೆರಿಕನ್ ಡಾಲರ್ ವಿರುದ್ಧ ಶೇಕಡಾ 7.5ರಷ್ಟು ಮೌಲ್ಯವನ್ನು ಶ್ರೀಲಂಕಾದ ರುಪಿ ಕಳೆದುಕೊಂಡಿದೆ. ಈಗ ಘೋಷಣೆಯಾಗಿರುವ ಆರ್ಥಿಕ ತುರ್ತುಪರಿಸ್ಥಿತಿ ಮಂಗಳವಾರ ರಾತ್ರಿಯಿಂದ ಜಾರಿಗೆ ಬಂದಿದೆ.
ಈ ಅವಧಿಯಲ್ಲಿ ಅಗತ್ಯ ವಸ್ತುಗಳ ಸಂಗ್ರಹವನ್ನು ತಡೆಯಲಾಗುತ್ತದೆ. ಈ ಕಾರ್ಯಕ್ಕೆ ಮಾಜಿ ಸೇನಾ ಜನರಲ್ ಅನ್ನು ಸರ್ಕಾರವು ಅಗತ್ಯ ಸೇವೆಗಳ ಆಯುಕ್ತರನ್ನಾಗಿ ನೇಮಿಸಿದೆ. ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳು ಹೊಂದಿರುವ ದಾಸ್ತಾನನ್ನು ವಶಪಡಿಸಿಕೊಳ್ಳುವ ಅಧಿಕಾರವನ್ನು ಇವರು ಹೊಂದಿದ್ದಾರೆ.
ಅಧಿಕಾರಿಗಳು ಅಗತ್ಯ ಆಹಾರ ಪದಾರ್ಥಗಳ ದಾಸ್ತಾನು ಖರೀದಿಸುವ ಮೂಲಕ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಅಗತ್ಯ ಆಹಾರ ಪದಾರ್ಥಗಳನ್ನು ಒದಗಿಸಲು ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಧ್ಯಕ್ಷ ಗೋಟಬಯ ರಾಜಪಕ್ಸೆ ತಿಳಿಸಿದ್ದಾರೆ.
ಸಕ್ಕರೆ, ಈರುಳ್ಳಿ ಮತ್ತು ಆಲೂಗಡ್ಡೆಯಂತಹ ಮೂಲಭೂತ ಆಹಾರ ಪದಾರ್ಥಗಳ ಬೆಲೆಯಲ್ಲಿ ಏರಿಕೆಯಾದ ನಂತರ ಆರ್ಥಿಕ ತುರ್ತು ಪರಿಸ್ಥಿತಿ ಏರಿಕೆಯಂಥಹ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.
ಸದ್ಯದ ಪರಿಸ್ಥಿತಿಯಲ್ಲಿ ಹಾಲಿನ ಪುಡಿ, ಸೀಮೆಎಣ್ಣೆ ಮತ್ತು ಅಡುಗೆ ಅನಿಲ ಸೇರಿದಂತೆ ಇತರ ಸರಕುಗಳ ಕೊರತೆ ಕಾಣಿಸಿಕೊಂಡಿದೆ. ಅಂಗಡಿಗಳ ಹೊರಗೆ ಉದ್ದವಾದ ಸರತಿ ಸಾಲುಗಳಿವೆ. ವಿದೇಶಿ ವಿನಿಮಯ ದರದಲ್ಲಿನ ಹೆಚ್ಚಳವು ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಿದೆ ಅಲ್ಲಿನ ಸರ್ಕಾರ ಮಾಹಿತಿ ನೀಡಿದೆ.
ಇದನ್ನೂ ಓದಿ: Afghanistan: ಪಂಜ್‌ಶೀರ್‌ಗೆ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿದ ತಾಲಿಬಾನ್!