ಬೀಜಿಂಗ್(ಚೀನಾ): ಯುದ್ಧಕ್ಕೆ ಸಿದ್ಧರಾಗಿ ಇರಬೇಕು ಎಂದು ತನ್ನ ಸೇನೆಗೆ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಆದೇಶ ನೀಡಿದ್ದಾರೆ. ದೇಶದ ಸಮಗ್ರತೆ ಕಾಪಾಡಿಕೊಳ್ಳಲು ಸನ್ನದ್ಧವಾಗಿ ಇರುವಂತೆ ಪೀಪಲ್ಸ್ ಲಿಬರೇಷನ್ ಆರ್ಮಿ ಸಮಾವೇಶದಲ್ಲಿ ಜಿನ್ ಪಿಂಗ್ ಕರೆ ನೀಡಿದ್ದಾರೆ.
ಅತ್ಯಂತ ಪ್ರತಿಕೂಲ ಪರಿಸ್ಥಿತಿಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಶಿಕ್ಷಣದ ಕಾರ್ಯಕ್ರಮಗಳು, ಯುದ್ಧದ ಸಿದ್ಧತೆಗಳನ್ನು ಹೆಚ್ಚಿಸಬೇಕು. ಕ್ಲಿಷ್ಟ ಪರಿಸ್ಥಿತಿಯಲ್ಲೂ ದೇಶದ ಭದ್ರತೆ, ಸಾರ್ವಭೌಮತ್ವವನ್ನು ಕಾಪಾಡುವ ರೀತಿಯಲ್ಲಿ ಸಿದ್ಧರಾಗಬೇಕು ಎಂದು ಸೂಚಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಭಾರತ - ಚೀನಾ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವ ಬೆನ್ನಲ್ಲೇ ಚೀನಾದ ಅಧ್ಯಕ್ಷ ಜಿನ್‌ಪಿಂಗ್ ಈ ರೀತಿಯ ವ್ಯಾಖ್ಯಾನ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ. ಮತ್ತೊಂದೆಡೆ ವಿವಾದಾತ್ಮಕ ಚೈನಾ ಸಮುದ್ರ, ತೈವಾನ್ ಜಲಗಡಿಯಲ್ಲಿ ಅಮೆರಿಕದ ನೌಕಾದಳ ಗಸ್ತು ಪಡೆ ನಿಯೋಜಿಸಿರುವುದು ಕೂಡಲ ಈ ಹೇಳಿಕೆಗೆ ಮುಖ್ಯ ಕಾರಣ ಎನ್ನಲಾಗುತ್ತಿದೆ.
ಲಡಾಖ್ ಗಡಿಯಲ್ಲಿ ಚೀನಾದ ಉಪಟಳದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಇಂದು ಉನ್ನತ ಮಟ್ಟದ ಸಭೆ ನಡೆಸಿದರು. ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್, ಚೀಫ್ ಆಫ್ ಡಿಫೆನ್ಸ್ ಸ್ಟಾಪ್ ಬಿಪಿನ್ ರಾವತ್, ಭೂ, ವಾಯು, ನೌಕಾ ಸೇನೆಯ ಮುಖ್ಯಸ್ಥರು ಭಾಗವಹಿಸಿದ್ದರು. ಇದೇ ವೇಳೆ, ಚೀನಾ ಯೋಧರ ಪ್ರತಿರೋಧವನ್ನು ಸಮರ್ಥವಾಗಿ ಎದುರಿಸಬೇಕು ಎಂಬ ತೀರ್ಮಾನ ತೆಗೆದುಕೊಳ್ಳಲಾಗಿದೆ.