ನವದೆಹಲಿ: ಸದಸ್ಯ ರಾಷ್ಟ್ರಗಳ ಸಹಮತದ ಕೊರತೆಯಿಂದಾಗಿ ಸಾರ್ಕ್ (SAARC-South Asian Association for Regional Cooperation) ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯನ್ನು ರದ್ದು ಮಾಡಲಾಗಿದೆ.
ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಭಾರತ, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾ ಈ ಸಾರ್ಕ್ನ ಸಂಘಟನೆಯ ಸದಸ್ಯ ರಾಷ್ಟ್ರಗಳಾಗಿದ್ದು, ಎಲ್ಲ ರಾಷ್ಟ್ರಗಳ ಒಪ್ಪಿಗೆಯ ಕೊರತೆಯಿಂದಾಗಿ ಸಭೆಯನ್ನು ರದ್ದು ಮಾಡಲಾಗಿದೆ ಎಂದು ಸಾರ್ಕ್ನ ಅಧಿಕಾರಿಯೊಬ್ಬರು ಎಎನ್ಐಗೆ ಮಾಹಿತಿ ನೀಡಿದ್ದಾರೆ.
ಇದಕ್ಕೂ ಮೊದಲು ನೇಪಾಳದಲ್ಲಿ ಸಾರ್ಕ್ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆ ನಡೆಸಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ, ಈ ಬಗ್ಗೆ ನಿಖರವಾದ ಮಾಹಿತಿ ಇರಲಿಲ್ಲ. ಈಗ ಬೇರೆಯದೇ ಬೆಳವಣಿಗೆಯಲ್ಲಿ ಸಾರ್ಕ್ನ ಈ ಸಭೆ ರದ್ದಾಗಿದೆ.
ಸಮಸ್ಯೆ ಏನು?
ಈ ಬಾರಿಯ ಅಫ್ಘಾನಿಸ್ತಾನ ಸಾರ್ಕ್ನ ಸಮಸ್ಯೆ ಎಂದು ಹೇಳಲಾಗುತ್ತಿದೆ. ಈಗ ಅಲ್ಲಿ ಅಸ್ಥಿತ್ವಕ್ಕೆ ಬಂದಿರುವ ತಾಲಿಬಾನ್ ಸರ್ಕಾರವನ್ನು ಒಂದು ರಾಷ್ಟ್ರವನ್ನಾಗಿ ಪರಿಗಣಿಸಬೇಕೆ? ಅಥವಾ ಬೇಡವೇ? ಎಂಬ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಚೀನಾ, ಪಾಕ್ ಬಿಟ್ಟರೆ ಇನ್ಯಾವುದೇ ರಾಷ್ಟ್ರ ತಾಲಿಬಾನ್ ಸರ್ಕಾರವನ್ನು ಅಫ್ಘಾನಿಸ್ತಾನ ಸರ್ಕಾರ ಎಂದು ಒಪ್ಪಿಕೊಳ್ಳುತ್ತಿಲ್ಲ.
ಅಫ್ಘಾನಿಸ್ತಾನವನ್ನು ಈಗ ಸಾರ್ಕ್ನಲ್ಲಿ ಪ್ರತಿನಿಧಿಸಲು ಅವಕಾಶ ನೀಡಬೇಕೆಂದು ಪಾಕಿಸ್ತಾನ ಒತ್ತಾಯಿಸುತ್ತಿದೆ. ಆದರೆ, ಉಳಿದ ರಾಷ್ಟ್ರಗಳು ಪಾಕ್ ನಿಲುವನ್ನು ಖಂಡಿಸಿವೆ. ಇದೇ ಕಾರಣದಿಂದಾಗಿ ಈಗ ನಡೆಯಬೇಕಿದ್ದ ಸಾರ್ಕ್ನ ವಿದೇಶಾಂಗ ಇಲಾಖೆಗಳ ಮುಖ್ಯಸ್ಥರ ಸಭೆ ರದ್ದಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ತಾಲಿಬಾನ್ನಿಂದ ವಿಶ್ವಸಂಸ್ಥೆಗೆ ರಾಯಭಾರಿ ನೇಮಕ