ಮಾಸ್ಕೋ: ರಷ್ಯಾದ ರಕ್ಷಣಾ ಸಚಿವಾಲಯವು ಗಮಾಲೆಯಾ ರಿಸರ್ಚ್ ಇನ್‌ಸ್ಟಿಟ್ಯೂಟ್ ಸಹಭಾಗಿತ್ವದಲ್ಲಿ ಕೋವಿಡ್-19 ಲಸಿಕೆ ಶೋಧಿಸಿದ್ದು, ದೇಶದಲ್ಲಿ ಬಳಕೆಗೆ ಅಧಿಕೃತವಾಗಿ ನೋಂದಣಿ ಮಾಡಲಾಗಿದೆ. ಈ ಲಸಿಕೆ ವೈರಾಣುವಿನ ವಿರುದ್ಧ ಹೇಗೆ ಕೆಲಸ ಮಾಡುತ್ತದೆ ಎಂಬುದೀಗ ಭಾರಿ ಕುತೂಹಲ ಕೆರಳಿಸುವ ವಿಚಾರ.
ರಷ್ಯಾ ಅಧ್ಯಕ್ಷರ ಇಬ್ಬರು ಪುತ್ರಿಯರಲ್ಲಿ ಒಬ್ಬರಿಗೆ ಈಗಾಗಲೇ ಈ ಔಷಧ ನೀಡಲಾಗಿದ್ದು, ಅದಕ್ಕವರ ದೇಹ ಉತ್ತಮವಾಗಿಯೇ ಸ್ಪಂದಿಸಿದೆ. ಇದನ್ನು ವೈದ್ಯರು ದಾಖಲಿಸಿಕೊಂಡಿದ್ದಾರೆ. ಇದರ ಜೊತೆಗೆ, ಪರೀಕ್ಷೆಗಳ ಸಮಯದಲ್ಲಿ ಲಸಿಕೆಯ ಸಾಮರ್ಥ್ಯ ಸಾಬೀತಾಗಿದ್ದು, ಕೊರೊನಾ ವೈರಸ್ನಿಂದ ಇದು ಶಾಶ್ವತವಾದ ಆರೋಗ್ಯ ಪರಿಹಾರ ನೀಡುತ್ತದೆ ಎನ್ನುವ ವಿಚಾರವನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.
ಕೊರೊನಾ ವೈರಸ್ ಲಸಿಕೆಯನ್ನು ನೋಂದಾಯಿಸಿದ ವಿಶ್ವದ ಮೊದಲ ದೇಶ ರಷ್ಯಾ ಆಗಿದೆ. ಅನೇಕ ದೇಶಗಳ ವಿಜ್ಞಾನಿಗಳು 3ನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸುತ್ತಿರುವಾಗ ಲಸಿಕೆಯನ್ನು ಮುಂಚಿತವಾಗಿ ನೋಂದಣಿ ಮಾಡಿರುವುದಕ್ಕೆ ಹಲವರು ಚಕಾರವೆತ್ತಿದ್ದಾರೆ.
ರಷ್ಯಾದ ಕೊರೊನಾ ಲಸಿಕೆಯು ಅಡೆನೊವೈರಸ್ ಆಧಾರಿತ ವೈರಲ್ ವೆಕ್ಟರ್ ವ್ಯಾಕ್ಸಿನ್ ಆಗಿದೆ. ಇದು ದೇಹದಲ್ಲಿ ಪ್ರತಿರಕ್ಷಣಾ ಪ್ರತಿಕ್ರಿಯೆ ಉಂಟುಮಾಡಲು ಸಾರ್ಸ್- ಕೊವಿ-2 (SARS-CoV-2) ವೈರಸ್‌ನ ಸ್ಪೈಕ್ ಪ್ರೋಟೀನ್‌ನೊಂದಿಗೆ ಜೋಡಿಸಲ್ಪಟ್ಟಿದೆ.
ಲಸಿಕೆಯ ಸುರಕ್ಷತೆ ಮತ್ತು ಪರಿಣಾಮಕಾರಿ ಬಗೆಗಿನ ಊಹಾಪೋಹಗಳಿಗೆ ಗಮಾಲೆಯಾ ರಿಸರ್ಚ್ ಇನ್‌ಸ್ಟಿಟ್ಯೂಟ್ ನಿರ್ದೇಶಕ ಅಲೆಕ್ಸಾಂಡರ್ ಗಿಂಟ್ಸ್‌ಬರ್ಗ್ ಸ್ಪಷ್ಟನೆ ನೀಡಿದ್ದು, ಲಸಿಕೆಯಲ್ಲಿನ ಕೊರೊನಾ ವೈರಸ್ ಕಣಗಳು ದೇಹಕ್ಕೆ ಹಾನಿ ತಂದೊಡ್ಡಲಾರವು ಎಂದು ಸಮರ್ಥಿಸಿಕೊಂಡಿದ್ದಾರೆ.
ರಷ್ಯಾದ ಸ್ವಚ್ಛತಾ ಕಾವಲುಗಾರ ‘ಅನ್ನಾ ಪೊಪೊವಾ’ ಲಸಿಕೆ ಬಳಕೆಗೆ ಗ್ರೀನ್ಸಿಗ್ನಲ್ ನೀಡಿದೆ. ಆದರೆ, ತಜ್ಞರು ಲಸಿಕೆಯನ್ನು ತ್ವರಿತಗತಿಯಲ್ಲಿ ಅಭಿವೃದ್ಧಿಪಡಿಸಿದ ವಿಧಾನವನ್ನು ಪ್ರಶ್ನಿಸುತ್ತಿದ್ದಾರೆ.
ಸಾಂಕ್ರಾಮಿಕ ರೋಗಗಳ ಮಾಜಿ ಮುಖ್ಯಸ್ಥ ಅಲೆಕ್ಸಾಂಡರ್ ಚೆಪರ್ನೋವ್ ಅವರು ರಷ್ಯಾ ಸರ್ಕಾರ ಒದಗಿಸಿದ ಮಾಹಿತಿಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ತಪ್ಪು ಲಸಿಕೆ ಬಳಕೆಯಿಂದ ರೋಗದ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ. ಇದು ಅಪಾಯಕ್ಕೆ ದಾರಿ ಮಾಡಿಕೊಡಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಕೆಲವು ಕಾಯಿಲೆಗಳೊಂದಿಗೆ ಕೆಲವು ಪ್ರತಿಕಾಯಗಳೂ ಇದ್ದರೂ ಸೋಂಕು ತೀವ್ರಗೊಳ್ಳುತ್ತದೆ. ಆದ್ದರಿಂದ ಲಸಿಕೆ ಯಾವ ಪ್ರತಿಕಾಯಗಳನ್ನು ರೂಪಿಸುತ್ತದೆ ಎಂಬುದನ್ನು ತಿಳಿಸುವಂತೆ ತಾಕೀತು ಮಾಡಿದ್ದಾರೆ.
ಸುರಕ್ಷಿತ ಮತ್ತು ಪರಿಣಾಮಕಾರಿ ಕೊರೊನಾ ವೈರಸ್ ಲಸಿಕೆ ತಯಾರಿಸಲು ಈಗಾಗಲೇ ಸ್ಥಾಪಿಸಲಾದ ಮಾರ್ಗಸೂಚಿಗಳ ಪ್ರಕಾರ ಮುಂದುವರಿಯುವಂತೆ ವಿಶ್ವ ಆರೋಗ್ಯ ಸಂಸ್ಥೆಯು ರಷ್ಯಾದ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ತಿಳಿಸಿದೆ.