ಇಸ್ಲಮಾಬಾದ್: ವಿಶ್ವಸಂಸ್ಥೆಯಲ್ಲಿ ಕಾಶ್ಮೀರದ ವಿಚಾರ ಪ್ರಸ್ತಾಪಮಾಡಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಪಾಕಿಸ್ತಾನಕ್ಕೆ ಹಿಂದಿರುಗಿದ ನಂತರವೂ ಅದನ್ನ ಮುಂದುವರೆಸಿದ್ದಾರೆ.
ಅಮೆರಿಕದಿಂದ ಪಾಕಿಸ್ತಾನಕ್ಕೆ ಬಂದಿಳಿದ ಇಮ್ರಾನ್ ಖಾನ್, ವಿಮಾನ ನಿಲ್ದಾಣದಲ್ಲಿ ಪಕ್ಷದ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ಇಡೀ ಜಗತ್ತೇ ಕಾಶ್ಮೀರವನ್ನ ಬೆಂಬಲಿಸದಿದ್ದರೂ ಪಾಕಿಸ್ತಾನ, ಕಾಶ್ಮೀರಿಗಳನ್ನು ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ.
ಕಾಶ್ಮೀರಿಗರ ಪರವಾಗಿ ನಿಲ್ಲುವುದು ಎಂದರೆ 'ಜಿಹಾದ್' ಇದ್ದಂತೆ. ಇದು ಅಲ್ಲಾನಿಗೆ ಪ್ರಿಯವಾದ ಕೆಲಸ ಹೀಗಾಗಿ ನಾವು ಕಾಶ್ಮೀರಿಗರನ್ನ ಬೆಂಬಲಿಸುತ್ತೇವೆ. ಪಾಕ್ ಕಾಶ್ಮೀರಿಗರ ಪರವಾಗಿ ನಿಂತರೆ ಕಾಶ್ಮೀರ ಗೆಲುವು ಸಾಧಿಸುತ್ತದೆ ಎಂದಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲೂ ಜಮ್ಮು ಮತ್ತು ಕಾಶ್ಮೀರದ ವಿಷಯ ಪ್ರಸ್ಥಾಪಿಸಿದ್ದ ಇಮ್ರಾನ್ ಖಾನ್, ಭಾರತ- ಪಾಕಿಸ್ತಾನ ಪರಮಾಣು ದೇಶಗಳಾಗಿದ್ದು, ಒಂದು ವೇಳೆ ಯುದ್ಧ ಖಚಿತವಾದರೆ ಇದರಿಂದ ವಿಶ್ವದ ಸರ್ವನಾಶ ಖಚಿತ. ನಾವು ಸೋಲು ಕಾಣಬಹುದು ಆದರೆ ಕೊನೆ ಉಸಿರು ಇರುವವರೆಗೂ ಹೋರಾಟ ನಡೆಸುತ್ತೇವೆ ಎಂದು ಹೇಳಿದ್ದರು.