ಮಾಸ್ಕೋ(ರಷ್ಯಾ) : ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಜಾರ್ಜಿಯಾಗೆ ಹಾರುವ ಎಲ್ಲಾ ರಷ್ಯನ್ ಏರ್ಲೈನ್ ವಿಮಾನಗಳನ್ನು ತಾತ್ಕಾಲಿಕವಾಗಿ ನಿಷೇಧಿಸಿದ್ದಾರೆ.
ಗುರುವಾರವಷ್ಟೇ ರಷ್ಯಾ ನಿಯೋಗದ ವಿರುದ್ಧ ಜಾರ್ಜಿಯಾ ಸಂಸತ್ತಿನ ಆವರಣದಲ್ಲಿ ಪ್ರತಿಭಟನೆ ನಡೆದಿತ್ತು. ಇದರ ಬೆನ್ನಲ್ಲೇ ಈ ಹೊಸ ಆಜ್ಞೆಯನ್ನ ರಷ್ಯಾ ಅಧ್ಯಕ್ಷ ಹೊರಡಿಸಿದ್ದಾರೆ. ಜುಲೈ 8 ರಿಂದಲೇ ವಾಣಿಜ್ಯ ವಿಮಾನಗಳು ಸೇರಿದಂತೆ ರಷ್ಯನ್ ಏರ್ಲೈನ್ಸ್ನ ಎಲ್ಲಾ ವಿಮಾನಗಳನ್ನು ಜಾರ್ಜಿಯಾಗೆ ಹಾರುವುದನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.
ರಷ್ಯಾ ಒಕ್ಕೂಟದ ರಾಷ್ಟ್ರೀಯ ಭದ್ರತೆ ಉಳಿಸಿಕೊಳ್ಳುವ ಸಲುವಾಗಿ ಹಾಗೂ ದೇಶದ ನಾಗರಿಕರನ್ನು ಕ್ರಿಮಿನಲ್ ಹಾಗೂ ಕಾನೂನುಬಾಹಿರ ಕ್ರಿಯೆಗಳಿಂದ ರಕ್ಷಿಸುವ ನಿಟ್ಟಿನಲ್ಲಿ, ಪುಟಿನ್ ಇದಕ್ಕೆ ಸಂಬಂಧಿಸಿದ ಮಹತ್ತರ ದಾಖಲೆಗೆ ಸಹಿ ಹಾಕಿದ್ದಾರೆ.
ಕಳೆದ ಗುರುವಾರವಷ್ಟೇ ಸಾವಿರಾರು ಪ್ರತಿಭಟನಾಕಾರರು, ಜಾರ್ಜಿಯಾ ಸಂಸತ್ತಿನ ಹೊರಗಡೆ, ರಷ್ಯಾದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ವೇಳೆ ಹಲವು ಪ್ರತಿಭಟನಾಕಾರರು ಸಂಸತ್ ಕಟ್ಟಡಕ್ಕೆ ಹಾನಿ ಮಾಡಲೂ ಪ್ರಯತ್ನಿಸಿದರು. ಈ ವೇಳೆ ಪೊಲೀಸರು ಅಶ್ರುವಾಯು ಪ್ರದರ್ಶಿಸಿ, ಪ್ರತಿಭಟನಾಕಾರರನ್ನು ಚದುರಿಸಿದ್ದರು. ಘಟನೆಯಲ್ಲಿ ಸುಮಾರು 240 ಜನ ಗಾಯಗೊಂಡಿದ್ದರು. ಈ ವೇಳೆ ಸುಮಾರು 300 ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದರು.
ಸದ್ಯ ಜಾರ್ಜಿಯಾದಲ್ಲಿ ಪ್ರಕ್ಷುಬ್ಧ ವಾತಾವರಣವಿದ್ದು, ಬೂದಿ ಮುಚ್ಚಿದ ಕೆಂಡವಾಗಿದೆ. ಹೀಗಾಗಿ ದೇಶದ ನಾಗರಿಕರಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ರಷ್ಯಾ ಅಧ್ಯಕ್ಷರು ಆ ರಾಷ್ಟ್ರದ ಮೇಲೆ ಹಾರಾಟ ನಡೆಸುವ ಎಲ್ಲ ವಿಮಾನಗಳ ಮೇಲೆ ತಾತ್ಕಾಲಿಕ ನಿಷೇಧ ಹೇರಿದ್ದಾರೆ.