ಇಸ್ಲಮಾಬಾದ್ (ಪಾಕಿಸ್ತಾನ): ಪ್ರಧಾನಿ ಇಮ್ರಾನ್ ಖಾನ್ ಹಾಗೂ ಅವರ ಆರ್ಥಿಕ ಸಲಹೆಗಾರ ಕೀಳು ಮಟ್ಟದ ಮನಸ್ಥಿತಿ ಹೊಂದಿದವರಾಗಿದ್ದಾರೆ ಎಂದು ಪಾಕಿಸ್ತಾನ್ ಮುಸ್ಲಿಂ ಲೀಗ್ ನವಾಜ್ನ ಕಾರ್ಯದರ್ಶಿ ಮರಿಯೂಮ್ ಔರಂಗಜೇಬ್ ವಾಗ್ದಾಳಿ ನಡೆಸಿದ್ದಾರೆ.
ಇವರಿಬ್ಬರು ಆರೋಗ್ಯ ಮತ್ತು ಸಾವಿನಂತಹ ಸೂಕ್ಷ್ಮ ವಿಚಾರಗಳನ್ನು ರಾಜಕೀಯಗೊಳಿಸುತ್ತಿದ್ದಾರೆ. ಅವರಲ್ಲಿ ಕೀಳುಮಟ್ಟದ ಮನಸ್ಥಿತಿ ಇದೆ ಎಂದಿದ್ದಾರೆ. ಕೆಲವೊಮ್ಮೆ ಅವರು ಆರೋಗ್ಯದ ಸಮಸ್ಯೆಯನ್ನು ರಾಜಕೀಯಗೊಳಿಸಿದರೆ ಇನ್ನೂ ಕೆಲವೊಮ್ಮೆ ಯಾರೊಬ್ಬರ ತಾಯಿಯ ಮರಣವನ್ನೂ ರಾಜಕೀಯಗೊಳಿಸುತ್ತಾರೆ ಎಂದು ಕಿಡಿಕಾರಿದ್ದಾರೆ.
ಆಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಶಹಬಾಜ್ ಷರೀಫ್ ಮತ್ತು ಹಮ್ಜಾ ಷರೀಫ್ ಅವರ ತಾಯಿ ಮರಣ ಹೊಂದಿದ ಆರು ದಿನಗಳ ಬಳಿಕ ಪೆರೋಲ್ ಮೇಲೆ ಬಿಡುಗಡೆ ಮಾಡಲಾಯಿತು. ಇದು ಅವರ ಕೀಳು ಅಭಿರುಚಿಯ ರಾಜಕೀಯ ತೋರಿಸುತ್ತಿದೆ ಎಂದಿದ್ದಾರೆ.
ಅವರಲ್ಲಿ ಯಾವುದೇ ಮಾನವೀಯತೆ ಮತ್ತು ಮರ್ಯಾದೆ ಉಳಿದಿಲ್ಲ, ತಾಯಿ ಬೇಗಂ ಅಖ್ತರ್ ಅವರ ಮರಣದ ಬಳಿಕ ಶಹಬಾದ್ ಮತ್ತು ಹಮ್ಜಾ ಅವರನ್ನು ಬಿಡುಗಡೆ ಮಾಡಬಹುದಿತ್ತು ಎಂದು ಇಮ್ರಾನ್ ಹಾಗೂ ಸಲಹೆಗಾರರ ವಿರುದ್ಧ ಕಟುವಾಗಿ ಟೀಕಿಸಿದ್ದಾರೆ.
ಪ್ರಧಾನಿ ಇಮ್ರಾನ್ ಖಾನ್ ಆದೇಶದಂತೆ ಕೇವಲ 5 ದಿನಗಳ ಪೆರೋಲ್ ನೀಡಲಾಗಿದೆ. ಆದರೆ, ನ್ಯಾಯಾಲಯದ ಪ್ರಕಾರ ಕನಿಷ್ಠ 15 ದಿನಗಳ ಪೆರೋಲ್ ನೀಡಬೇಕಿತ್ತು ಎಂದು ಆರೋಪಿಸಿದ್ದಾರೆ.
ಶಹಬಾಜ್ ಷರೀಫ್ ಮತ್ತು ಹಮ್ಜಾ ಷರೀಫ್ ಅವರು ಪೆರೋಲ್ ಪಡೆಯುವುದು ಅವರ ಹಕ್ಕಾಗಿದೆ. ಆದರೆ, ಈ ಸರ್ಕಾರವು ಕೀಳು ಮನಸ್ಥಿತಿ ಹೊಂದಿದೆ. ಕೆಳಮಟ್ಟದ ಚಿಂತನೆ ಹೊಂದಿದೆ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: ಬಾಬಾ ಜಾನ್ ಬಿಡುಗಡೆಗೊಳಿಸಿದ ಪಾಕ್... ಯಾರು ಈ ಬಾಬಾ?