ಇಸ್ತಾಂಬುಲ್: ಲ್ಯಾಂಡಿಂಗ್ ವೇಳೆ ರನ್ವೇಯಿಂದ ವಿಮಾನ ಸ್ಕಿಡ್ ಆಗಿ ಪಕ್ಕದಲ್ಲಿರುವ ಖಾಲಿ ಜಾಗಕ್ಕೆ ನುಗ್ಗಿ ಮೂರು ಭಾಗವಾಗಿದೆ. ಸಂಭವಿಸಿದ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದು, 179 ಮಂದಿ ಗಾಯಗೊಂಡಿರುವ ಘಟನೆ ಇಸ್ತಾಂಬುಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಇಜ್ಮೀರ್ನಿಂದ ಇಸ್ತಾಂಬುಲ್ಗೆ ಬಂದ ವಿಮಾನದಲ್ಲಿ 6 ಸಿಬ್ಬಂದಿ ಮತ್ತು 177 ಪ್ರಯಾಣಿಕರಿದ್ದರು. ಸಬಿಹಾ ಗೋಕ್ಸೆನ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ವಿಮಾನ ಸ್ಕಿಡ್ ಆಗಿದೆ. ಪರಿಣಾಮ ರನ್ವೇ ಪಕ್ಕದಲ್ಲಿರುವ ಖಾಲಿ ಜಾಗಕ್ಕೆ ವಿಮಾನ ನುಗ್ಗಿ ಮೂರು ಭಾಗವಾಗಿದೆ.
ವಿಮಾನ ದುರಂತ ಸಂಭವಿಸುತ್ತಿದ್ದಂತೆ ರಕ್ಷಣಾ ಕಾರ್ಯ ಭರದಿಂದ ಸಾಗಿತ್ತು. ವಿಮಾನದಲ್ಲಿ ಸಿಲುಕಿಕೊಂಡವರನ್ನು ರಕ್ಷಣಾ ಸಿಬ್ಬಂದಿ ಹೊರ ತರಲು ಹರಸಾಹಸ ಪಟ್ಟರು. ದುರಂತದಲ್ಲಿ ಮೂವರು ಸಾವನ್ನಪ್ಪಿದ್ದು, 179 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಈ ಘಟನೆಗೆ ‘ರಫ್ ಲ್ಯಾಂಡಿಂಗ್’ ಕಾರಣವೆಂದು ಟರ್ಕಿ ದೇಶದ ಸಾರಿಗೆ ಸಚಿವ ಮೆಹ್ಮತ್ ಹೇಳಿದ್ದಾರೆ. ಈ ದುರಂತದ ಬಗ್ಗೆ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.