ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ 57 ಮೃತದೇಹಗಳು ಮಾತ್ರ ಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪಾಕಿಸ್ತಾನ್ ಇಂಟರ್ನ್ಯಾಶನಲ್ ಏರ್ಲೈನ್ಸ್ (ಪಿಐಎ)ಗೆ ಸೇರಿದ ಎ -320 ವಿಮಾನ ಲ್ಯಾಂಡಿಂಗ್ ವೇಳೆ ಜನವಸತಿ ಪ್ರದೇಶದ ಮೇಲೆ ಪತನಗೊಂಡಿದೆ. ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವೇ ಈ ದುರಂತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಪಾಕಿಸ್ತಾನ ಸೇನೆ ಮತ್ತು ವಾಯುಪಡೆ ತೆರಳಿ ರಕ್ಷಣಾ ಕಾರ್ಯ ನಡೆಸಿವೆ.
ಲಾಹೋರ್ನಿಂದ ಹೊರಟಿದ್ದ ವಿಮಾನ ಇನ್ನೇನು ಕರಾಚಿಯಲ್ಲಿ ಲ್ಯಾಂಡ್ ಆಗಲಿದೆ ಎನ್ನುವಷ್ಟರಲ್ಲಿ ಪತನಗೊಂಡಿತ್ತು. ಲಾಹೋರ್ನ ಇಕ್ಕಟ್ಟಾದ ಗಲ್ಲಿಯೊಂದರಲ್ಲಿ ಈ ವಿಮಾನ ನೆಲಕ್ಕಪ್ಪಳಿಸಿತ್ತು. ಸ್ಥಳದಲ್ಲಿ ಕ್ಷಣಾರ್ಧದಲ್ಲಿ ಆತಂಕ, ಭಯದ ವಾತಾವರಣ ಉಂಟಾಗಿತ್ತು. ನೋಡನೋಡುತ್ತಿದ್ದಂತೆ ಧೂಳು ಮತ್ತು ದಟ್ಟ ಹೊಗೆ ಬಾನೆತ್ತರಕ್ಕೆ ವ್ಯಾಪಿಸಿತ್ತು. ದಟ್ಟ ಹೊಗೆಯ ನಡುವೆ ವಿಮಾನ ಹೋಳಾಗಿ ಗಲ್ಲಿಯಲ್ಲಿ ಬಿದ್ದಿತ್ತು. ವಿಮಾನ ಪತನಗೊಂಡಾಗ ಉಂಟಾದ ಭಯಂಕರ ಸದ್ದು ಕೇಳಿ ಜನರು ಭಯಭೀತಗೊಂಡಿದ್ದರು. ಏನಾಯಿತು ಎಂದು ಒಂದು ಕ್ಷಣ ಜನರಿಗೆ ಗೊತ್ತಾಗಲೇ ಇಲ್ಲ. ವಿಮಾನ ಜನವಸತಿ ಪ್ರದೇಶದ ಮೇಲೆ ಪತನಗೊಂಡಿದ್ದರಿಂದ 30 ಮಂದಿ ಸ್ಥಳೀಯರೂ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಅಪಘಾತದಲ್ಲಿ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಸಾವಿನ ಸಂಖ್ಯೆ ಎಷ್ಟು ಎಂಬುದು ಇನ್ನೂ ನಿಖರವಾಗಿ ಗೊತ್ತಾಗಿಲ್ಲ.
ತನಿಖೆಗೆ ಇಮ್ರಾನ್ ಖಾನ್ ಆದೇಶ
ದುರ್ಘಟನೆ ಕುರಿತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ದುರ್ಘಟನೆ ಬಗ್ಗೆ ತನಿಖೆ ನಡೆಸುವಂತೆ ಆದೇಶ ನೀಡಿದ್ದಾರೆ.
ಮೋದಿ, ರಾಹುಲ್ ಟ್ವೀಟ್
ಪ್ರಧಾನಿ ನರೇಂದ್ರ ಮೋದಿ ಘಟನೆ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ದುರ್ಘಟನೆ ಸುದ್ದಿ ಕೇಳಿ ಮನಸ್ಸಿಗೆ ಆಘಾತವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಸಹ ಕರಾಚಿ ದುರ್ಘಟನೆ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.