ಇಸ್ಲಾಮಾಬಾದ್ (ಪಾಕಿಸ್ತಾನ): ಪಾಕಿಸ್ತಾನ ತನ್ನ 'ಮಾವಿನ ಹಣ್ಣು ರಾಜತಾಂತ್ರಿಕತೆ'ಯ ಭಾಗವಾಗಿ ತನ್ನ 32 ಸ್ನೇಹಿತ ರಾಷ್ಟ್ರಗಳಿಗೆ ಮಾವಿನ ಹಣ್ಣುಗಳನ್ನು ಕಳುಹಿಸಿದೆ. ಈ ಮೂಲಕ ದ್ವಿಪಕ್ಷೀಯ ಸಂಬಂಧವನ್ನು ಗಟ್ಟಿಗೊಳಿಸುವ ಕಸರತ್ತು ಮಾಡಿತು.
ಪಾಕಿಸ್ತಾನ ವಿದೇಶಾಂಗ ಇಲಾಖೆ ಕಚೇರಿಯ ಮಾಹಿತಿಯಂತೆ ಅಮೆರಿಕ, ಚೀನಾ, ಇರಾನ್, ಟರ್ಕಿ, ಯುನೈಟೆಡ್ ಕಿಂಗ್‌ಡಂ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ರಷ್ಯಾಗಳಿಗೆ ಪಾಕ್ ಅಧ್ಯಕ್ಷ ಆರಿಫ್ ಅಲ್ವಿ ಪರವಾಗಿ ಮಾವು ಕಳುಹಿಸಲಾಗಿತ್ತು. ಸ್ವಾದಿಷ್ಟ ಮಾವು ತಳಿಗಳಾದ ಚೌನ್ಸಾ, ಅನ್ವರ್ ರಟ್ಟೋಲ್ ಮತ್ತು ಸಿಂಧಾರಿಗಳನ್ನು ಪಾಕಿಸ್ತಾ ನ ಈ ದೇಶಗಳಿಗೆ ಕಳುಹಿಸಿ ಇದೀಗ ಮುಖಭಂಗ ಅನುಭವಿಸಿದೆ.
ತಿರಸ್ಕೃತಗೊಂಡ ಪಾಕ್‌ನ Mango Diplomacy
ಪಾಕ್ ಮಾವಿನ ರಾಜತಾಂತ್ರಿಕತೆಯನ್ನು ಹಲವು ದೇಶಗಳು ಹಲವು ಕಾರಣಗಳನ್ನು ನೀಡಿ ಪಡೆಯಲು ನಿರಾಕರಿಸಿವೆ. ಕೋವಿಡ್ ನಿರ್ಬಂಧಗಳು, ರೋಗ ಹರಡುವ ಭೀತಿ ಹಾಗು ಇನ್ನಿತರ ಕಾರಣಗಳನ್ನು ಅಮೆರಿಕ ಕೊಟ್ಟಿದೆ. ಇನ್ನು, ಫ್ರಾನ್ಸ್ ಸೇರಿದಂತೆ ಕೆಲವು ದೇಶಗಳು ಈ ಬಗ್ಗೆ ಪಾಕಿಸ್ತಾನಕ್ಕೆ ಯಾವುದೇ ಮಾಹಿತಿ ನೀಡಿಲ್ಲ.
ಮಾವು ಪಡೆಯಲು ನಿರಾಕರಿಸಿದ ಪಾಕ್ ಬೆಸ್ಟ್ ಫ್ರೆಂಡ್ ಚೀನಾ
ಇನ್ನು ವಿಶೇಷ ಮತ್ತು ಅತ್ಯಂತ ಕುತೂಹಲಕಾರಿ ಸಂಗತಿ ಎಂದರೆ ಪಾಕಿಸ್ತಾನ ತನ್ನ ಸರ್ವ ಋತುಗಳ ಗೆಳೆಯ ಅಥವಾ ಆಪತ್ಬಾಂದವ ಎಂದೇ ಕರೆಯುವ ಚೀನಾ ದೇಶ ಪಾಕಿಸ್ತಾನದ ಮಾವು ಪಡೆಯಲು ಸುತಾರಾಂ ಒಪ್ಪಿಲ್ಲ. ಕಳೆದ 1960 ರಿಂದಲೂ ಚೀನಾ-ಪಾಕಿಸ್ತಾನದ ನಡುವೆ ಅನ್ಯೋನ್ಯ ಸಂಬಂಧವಿದೆ. ಅಂದು ಚೀನಾ ನಾಯಕ ಮಾವೋಜೆದೋಂಗ್ ಅವರಿಗೆ ಆಗಿನ ಪಾಕ್ ವಿದೇಶಾಂಗ ಸಚಿವ ಮಿಯಾನ್ ಅರ್ಷದ್ ಹುಸೈನ್ ಮಾವಿನ ಹಣ್ಣುಗಳನ್ನು ಗಿಫ್ಟ್ ಆಗಿ ಕೊಟ್ಟಿದ್ದರು. ಅಲ್ಲಿಂದ ಈ ಪರಿಪಾಠ ನಡೆದುಕೊಂಡು ಬಂದಿದೆ.