ಇಸ್ಲಾಮಾಬಾದ್ (ಪಾಕಿಸ್ತಾನ): ಪಾಕಿಸ್ತಾನದ ಅಂತರಾಷ್ಟ್ರೀಯ ಚಿತ್ರಣವು ಹಲವಾರು ವಿಷಯಗಳ ಹಿನ್ನೆಲೆ ಹದಗೆಡುತ್ತಲೇ ಇದೆ. ಇದೀಗ ಪಾಕಿಸ್ತಾನ ಇಂಟರ್ ನ್ಯಾಷನಲ್ ಏರ್ಲೈನ್ಸ್ಗೆ ಯುರೋಪಿಯನ್ ಒಕ್ಕೂಟ ತೀವ್ರ ಹೊಡೆತ ನೀಡಿದೆ.
ಲಾಕ್ಡೌನ್ ಕ್ರಮಗಳು ಸರಾಗಗೊಂಡಿರುವ ಹೊರತಾಗಿಯೂ ಪಾಕಿಸ್ತಾನಿಗಳಿಗೆ ವಿವಿಧ ಯುರೋಪಿಯನ್ ದೇಶಗಳಿಗೆ ಪ್ರವೇಶಿಸಲು ಅನುಮಾತಿ ನಿರಾಕರಿಸಲಾಗಿದೆ. ಯುರೋಪಿಯನ್ ದೇಶಗಳಲ್ಲಿ ಪಾಕಿಸ್ತಾನ ಇಂಟರ್ ನ್ಯಾಷನಲ್ ಏರ್ಲೈನ್ಸ್ನ (ಪಿಐಎ) ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
"ಮೊದಲು, ಪಾಕಿಸ್ತಾನಿಗಳಿಗೆ ವಿವಿಧ ದೇಶಗಳಿಗೆ ಪ್ರವೇಶಿಸಲು ಅನುಮತಿ ಇಲ್ಲದಂತಾಯಿತು. ಬಳಿಕ ಗಲ್ಫ್ ಏರ್ಲೈನ್ಸ್ ಪಾಕಿಸ್ತಾನಕ್ಕೆ ಬರಲು ನಿರಾಕರಿಸಿತು. ಈಗ ಪಾಕಿಸ್ತಾನ ಇಂಟರ್ ನ್ಯಾಷನಲ್ ಏರ್ಲೈನ್ಸ್ಗೆ ಯುರೋಪ್ಗೆ ಪ್ರವೆಶಿಸಲು ಅವಕಾಶವಿಲ್ಲ!" ಎಂದು ಪಾಕಿಸ್ತಾನದ ಖ್ಯಾತ ಪತ್ರಕರ್ತ ನಜಮ್ ಸೇಥಿ ಟ್ವೀಟ್ ಮಾಡಿದ್ದಾರೆ.
ಜುಲೈನಿಂದ ಯುರೋಪಿಯನ್ ಒಕ್ಕೂಟದ ಗಡಿಗಳು ತೆರೆದಿದ್ದರೂ, ಯುರೋಪ್ಗೆ ಪ್ರವೆಶಿಸಲು ಅನುಮತಿ ಇರುವ 54 ದೇಶಗಳ ಕರಡು ಪಟ್ಟಿಯಲ್ಲಿ ಪಾಕಿಸ್ತಾನವನ್ನು ಸೇರಿಸಿರಲಿಲ್ಲ.
ಪಾಕಿಸ್ತಾನ ಇಂಟರ್ ನ್ಯಾಷನಲ್ ಏರ್ಲೈನ್ಸ್ನ ವಿಮಾನಗಳಿಗೆ ಯುರೋಪಿಯನ್ ಯೂನಿಯನ್ ಮತ್ತು ಬ್ರಿಟನ್ನಲ್ಲಿ ಆರು ತಿಂಗಳ ಕಾಲ ನಿರ್ಬಂಧ ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.