ಇಸ್ಲಾಮಾಬಾದ್: ದೇಶಾದ್ಯಂತ ಕೊರೊನಾ ವ್ಯಾಕ್ಸಿನ್ ಲಸಿಕೆ ನೀಡುವ ಸಮಗ್ರ ಯೋಜನೆಯನ್ನು ಮುಂದಿನ ವಾರದಿಂದ ಪಾಕಿಸ್ತಾನ ಆರಂಭಿಸಲಿದ್ದು, ರಾಷ್ಟ್ರೀಯ ಕಮಾಂಡ್ ಮತ್ತು ಆಪರೇಷನ್ ಸೆಂಟರ್ (ಎನ್‌ಸಿಒಸಿ) ಅನಾವರಣಗೊಳಿಸುವುದರೊಂದಿಗೆ ಅಭಿಯಾನ ಆರಂಭವಾಗಲಿದೆ.
ಪಾಕಿಸ್ತಾನ ಯೋಜನಾ ಸಚಿವ ಅಸಾದ್ ಉಮರ್ ಈ ವಿಚಾರವನ್ನು ಬಹಿರಂಗಪಡಿಸಿದ್ದು, ಆರೋಗ್ಯ ಕಾರ್ಯಕರ್ತರಿಗೆ ಮೊದಲು ಕೊರೊನಾ ಲಸಿಕೆ ನೀಡಲಾಗುತ್ತದೆ. ದೇವರ ಇಚ್ಛೆಯಂತೆ ಮುಂದಿನ ವಾರವೇ ವ್ಯಾಕ್ಸಿನೇಷನ್ ಆರಂಭವಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ದೇಶದ ನೂರಾರು ವ್ಯಾಕ್ಸಿನೇಷನ್ ಕೇಂದ್ರಗಳು ಕೋವಿಡ್ ಲಸಿಕೆ ನೀಡಲಿವೆ. ಮುಂದಿನ ವಾರ ಆರೋಗ್ಯ ಕಾರ್ಯಕರ್ತರಿಗೆ ವ್ಯಾಕ್ಸಿನೇಷನ್ ಪ್ರಾರಂಭವಾಗಲಿದೆ ಎಂದು ಅಸಾದ್ ಉಮರ್ ಮತ್ತೊಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಚೀನಾದ ಸಿನೋಫಾರ್ಮ್ ತಯಾರಿಸಿದ ಲಸಿಕೆಯ 5 ಲಕ್ಷ ಡೋಸ್ಗಳನ್ನು ನೀಡುವುದಾಗಿ ಹೇಳಿದ ಬಳಿಕ ಪಾಕಿಸ್ತಾನದಲ್ಲಿ ವ್ಯಾಕ್ಸಿನೇಷನ್ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಲಸಿಕೆಗಳ ಮೊದಲ ಬ್ಯಾಚ್ ಶನಿವಾರದೊಳಗೆ ಪಾಕಿಸ್ತಾನಕ್ಕೆ ಬರಲಿದೆ.
ಇದನ್ನೂ ಓದಿ: ಚೆಕ್ ಬೌನ್ಸ್ ಪ್ರಕರಣ: ಕಾಫಿ ಡೇ ಮುಖ್ಯಸ್ಥೆ ಮಾಳವಿಕಾಗೆ ಜಾಮೀನು
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಅಡಿಯಲ್ಲಿ ರೂಪಿಸಿದ ನೀತಿಯಂತೆ ಪಾಕಿಸ್ತಾನವು ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಲಸಿಕೆಯನ್ನು ಪಡೆಯಲಿದೆ. ಪಾಕಿಸ್ತಾನ ಕೋವಿಡ್ ನಿರ್ವಹಣೆಗೆ ಎನ್‌ಸಿಒಸಿ ಸ್ಥಾಪನೆ ಮಾಡಿದ್ದು, ದೇಶಾದ್ಯಂತ ಲಸಿಕೆ ನೀಡುವ ಯೋಜನೆಯನ್ನು ಸಿದ್ಧಪಡಿಸಿದೆ. ಎಲ್ಲಾ ಅಧಿಕಾರಿಗಳ ನಡುವಿನ ಸಮಾಲೋಚನೆಯ ನಂತರ ಈ ಯೋಜನೆಯನ್ನು ರೂಪಿಸಲಾಗಿದೆ.
ಯೋಜನೆಯ ಪ್ರಕಾರ, ದೇಶಾದ್ಯಂತ ವ್ಯಾಕ್ಸಿನೇಷನ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಆದರೆ ಚುಚ್ಚುಮದ್ದಿನ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸಿಬ್ಬಂದಿಗೆ ತರಬೇತಿ ಮತ್ತು ಇತರ ವ್ಯವಸ್ಥೆಗಳನ್ನು ಸಿದ್ಧಪಡಿಸಲಾಗುತ್ತಿದೆ.
ಲಸಿಕೆ ಪಡೆಯಲು ಇಚ್ಛಿಸುವವರು ತಮ್ಮ ಗುರುತಿನ ಚೀಟಿ ಸಂಖ್ಯೆಯನ್ನು 1166ಗೆ ಎಸ್‌ಎಂಎಸ್ ಅಥವಾ ವೆಬ್‌ಸೈಟ್ ಮೂಲಕ ಕಳುಹಿಸುವ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.