ಇಸ್ಲಾಮಾಬಾದ್(ಪಾಕಿಸ್ತಾನ): ಅಫ್ಘಾನಿಸ್ತಾನದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸುವ ಸಲುವಾಗಿ ಪಾಕಿಸ್ತಾನವು ಇಸ್ಲಾಮಾಬಾದ್‌ನಲ್ಲಿ ಸಭೆಯೊಂದನ್ನು ಆಯೋಜಿಸಲಾಗಿದ್ದು, ಗುರುವಾರ ನಡೆಯಲಿರುವ ಈ ಸಭೆಯಲ್ಲಿ ಅಮೆರಿಕ, ಚೀನಾ ಮತ್ತು ರಷ್ಯಾದ ಹಿರಿಯ ರಾಜತಾಂತ್ರಿಕ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಮೊಯೀದ್ ಯೂಸುಫ್ ಈ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಅಫ್ಘಾನಿಸ್ತಾನದ ಹಂಗಾಮಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರನ್ನು ಈ ರಾಜತಾಂತ್ರಿಕ ನಾಯಕರು ಭೇಟಿಯಾಗಲಿದ್ದಾರೆ ಎಂದು ಪಾಕ್ ಪತ್ರಿಕೆ ಡಾನ್ ವರದಿ ಮಾಡಿದೆ.
ಮುತ್ತಕಿ ಇಂದು ಇಸ್ಲಾಮಾಬಾದ್‌ಗೆ ಆಗಮಿಸಲಿದ್ದಾರೆ. ಆಗಸ್ಟ್‌ನಲ್ಲಿ ತಾಲಿಬಾನ್ ಕಾಬೂಲ್ ಅನ್ನು ನಿಯಂತ್ರಣಕ್ಕೆ ತೆಗೆದುಕೊಂಡ ನಂತರ ಇದೇ ಮೊದಲ ಬಾರಿಗೆ ಅಫ್ಘಾನಿಸ್ತಾನದ ಸಚಿವರೊಬ್ಬರು ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿದ್ದಾರೆ.
ಪ್ರಸ್ತುತ ತಾಲಿಬಾನ್ ಅಂತಾರಾಷ್ಟ್ರೀಯ ಮಾನ್ಯತೆ ಪಡೆಯಲು ಬಯಸುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ದೇಶಗಳ ನಡುವೆ ಸಂಭಾಷಣೆ ನಡೆಸಲಾಗುತ್ತಿದೆ. ತಾಲಿಬಾನ್ ಸರ್ಕಾರ ಅಂತಾರಾಷ್ಟ್ರೀಯ ಸಮುದಾಯದ 'ಬೇಡಿಕೆಗಳನ್ನು' ಈಡೇರಿಸಿದರೆ ಮಾತ್ರ ಮಾನ್ಯತೆ ನೀಡಲಾಗುತ್ತದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.
ಈ ಸಭೆಗೆ ಟ್ರೋಕಾ ಪ್ಲಸ್ (Troika Plus) ಎಂದು ಕರೆಯಲಾಗಿದ್ದು, ಅಫ್ಘಾನ್ ಅಧಿಕಾರಿಗಳಿಗೆ ಇದು ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ಚರ್ಚಿಸುವ ಸಲುವಾಗಿ ಪ್ರಮುಖ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತದೆ. ಇದೇ ರೀತಿಯ ಸಭೆ ಆಗಸ್ಟ್‌ನಲ್ಲಿ ದೋಹಾದಲ್ಲಿ ನಡೆದಿತ್ತು. ನಂತರ ಅಕ್ಟೋಬರ್ನಲ್ಲಿ ಮಾಸ್ಕೋದಲ್ಲಿ ಈ ಸಭೆಯಲ್ಲಿ ಕರೆಯಲಾಗಿತ್ತು. ಅಮೆರಿಕವು ಈ ಸಭೆಯಲ್ಲಿ ಭಾಗವಹಿಸಿರಲಿಲ್ಲ.
ಇದನ್ನೂ ಓದಿ: ಪಶ್ಚಿಮ ಬಂಗಾಳ ಚುನಾವಣೋತ್ತರ ಹಿಂಸಾಚಾರ: ಮತ್ತೊಂದು ಪ್ರಕರಣ ದಾಖಲಿಸಿದ ಸಿಬಿಐ