ಇಸ್ಲಾಮಾಬಾದ್:1,210 ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪಟ್ಟಿಯನ್ನು ಪಾಕಿಸ್ತಾನ ಬಿಡುಗಡೆ ಮಾಡಿದೆ. ಇದರಲ್ಲಿ 2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದವರ ಹೆಸರು ಮತ್ತು ವಿಳಾಸ ಕೂಡ ಇದೆ.
ಇನ್ನೂ ಈ ಪಟ್ಟಿಯನ್ನು ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಯ(ಎಫ್‌ಐಎ) ಭಯೋತ್ಪಾದನಾ ನಿಗ್ರಹ ಘಟಕ ಬಿಡುಗಡೆ ಮಾಡಿದೆ. ಕುತೂಹಲಕಾರಿ ಸಂಗತಿ ಎಂದರೆ ಈ ಪಟ್ಟಿಯಲ್ಲಿ ಲಂಡನ್‌ನಲ್ಲಿ ವಾಸಿಸುವ ಮುತ್ತಾಹಿದಾ ಕೌಮಿ ಚಳವಳಿಯ (ಎಂಕ್ಯೂಎಂ) ನಾಯಕ ಅಲ್ತಾಫ್ ಹುಸೇನ್ ಮತ್ತು ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್(ಪಿಎಂಎಲ್-ಎನ್) ನ ಕಾರ್ಯಕರ್ತ ನಾಸಿರ್ ಬ್ಯಾಟ್ ಅವರ ಹೆಸರೂ ಇದೆ.
ಇದರಲ್ಲಿರುವ ಮೊದಲ 19 ಹೆಸರುಗಳು ಮುಂಬೈ ಭಯೋತ್ಪಾದಕ ದಾಳಿಗೆ ಒಂದಿಲ್ಲ ಒಂದು ರೀತಿಯಲ್ಲಿ ಸಂಬಂಧಪಟ್ಟಿವೆ. ಮೊದಲ ಹೆಸರು ಅಜ್ಮದ್ ಖಾನ್. ಈತ ಲಷ್ಕರ್-ಎ-ತೈಬಾದ ಮಾಜಿ ಸದಸ್ಯನಾಗಿದ್ದಾನೆ. ಈತ ಮುಂಬೈ ದಾಳಿಯ ಸಮಯದಲ್ಲಿ ಬಳಸಲಾಗಿದ್ದ ಅಲ್ ಫೌಜ್ ದೋಣಿ ಖರೀದಿಸಿದ್ದನು.
ಇನ್ನೊಂದು ಹೆಸರು ಇಫ್ತಿಖರ್ ಅಲಿ. ಈತ ಮಾಜಿ ಲಷ್ಕರ್ ಸದಸ್ಯ ಎಂದು ಗುರುತಿಸಲಾಗಿದೆ. ವಿವರಗಳ ಪ್ರಕಾರ ಈತ ಮುಂಬೈ ದಾಳಿ ನಡೆಸಿದ ಭಯೋತ್ಪಾದಕರೊಂದಿಗೆ ಮಾತನಾಡಲು ವಾಯ್ಸ್ ಓವರ್ ಇಂಟರ್ನೆಟ್ ಪ್ರೊಟೊಕಾಲ್(ವಿಒಐಪಿ) ಸಂಪರ್ಕವನ್ನು ನಿರ್ವಹಿಸುತ್ತಿದ್ದ ಎನ್ನಲಾಗಿದೆ.