ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಕೊರೊನಾ ಸೋಂಕಿನ ಭೀತಿಯಲ್ಲಿದ್ದು, ಬುಧವಾರ ಪರೀಕ್ಷೆಗೆ ಒಳಗಾಗಿದ್ದಾರೆ. ಶೌಕತ್ ಖಾನೂಮ್ ಮೆಮೋರಿಯಲ್ ಆಸ್ಪತ್ರೆಯ ವೈದ್ಯರ ತಂಡವೂ ಪ್ರಧಾನಮಂತ್ರಿಯವರ ರಕ್ತದ ಮಾದರಿಗಳನ್ನು ಸಂಗ್ರಹಿಸಿದೆ.
ಏಪ್ರಿಲ್ 15ರಂದು ಇಮ್ರಾನ್ ಖಾನ್ ಎಡಿ ಫೌಂಡೇಷನ್ನ ಅಧ್ಯಕ್ಷ ಫೈಸಲ್ ಎಂಬುವವರನ್ನು ಭೇಟಿಯಾಗಿದ್ದರು. ನಂತರ ಫೈಸಲ್ನಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಕಂಡುಬಂದಿದ್ದವು. ಹೀಗಾಗಿ ಇಮ್ರಾನ್ ಪರೀಕ್ಷೆಗೆ ಒಳಪಟ್ಟಿದ್ದಾರೆ. ಕೊರೊನಾ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡುವ ಸಲುವಾಗಿ ಫೈಸಲ್ 1 ಕೋಟಿ ರೂ. ಚೆಕ್ ಅನ್ನು ಪಾಕ್ ಪ್ರಧಾನಿ ಕೊರೊನಾ ನಿಯಂತ್ರಣ ನಿಧಿಗೆ ನೀಡಿದ್ದರು. ಈ ಚೆಕ್ಕನ್ನ ಸ್ವತಃ ಇಮ್ರಾನ್ ಖಾನ್ ಸ್ವೀಕರಿಸಿದ್ದರು. ಫೈಸಲ್ ಇಸ್ಲಾಮಾಬಾದ್ನಲ್ಲಿರುವ ಮನೆಯಲ್ಲಿಯೇ ಕ್ವಾರಂಟೈನ್ನಲ್ಲಿದ್ದಾರೆ.
ಜವಾಬ್ದಾರಿಯುತ ಪ್ರಧಾನ ಮಂತ್ರಿ ಮತ್ತು ಜವಾಬ್ದಾರಿಯುತ ನಾಗರಿಕನಾಗಿ ನನ್ನ ಸಲಹೆಯ ಮೇರೆಗೆ, ಪ್ರಧಾನಿ ಅವರು ಪರೀಕ್ಷೆಗೆ ಒಳಪಟ್ಟಿದ್ದಾರೆ ಎಂದು ಹೇಳಲು ಸಂತೋಷವಾಗುತ್ತದೆ ಎಂದು ಶೌಕತ್ ಖಾನೂಮ್ ಮೆಮೊರಿಯಲ್ ಕ್ಯಾನ್ಸರ್ ಆಸ್ಪತ್ರೆಯ ಸಿಇಒ ಡಾ.ಫೈಸಲ್ ಸುಲ್ತಾನ್ ಉಲ್ಲೇಖಿಸಿದ್ದಾರೆ ಎಂದು ಎಕ್ಸ್ ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
ಪ್ರಧಾನ ಮಂತ್ರಿ ಅವರ ಕುಟುಂಬವನ್ನು ಈಗಾಗಲೇ ಪರೀಕ್ಷೆಗೆ ಒಳಪಡಿಸಲಾಗಿದೆ. ಎಲ್ಲರ ವರದಿ ನೆಗೆಟಿವ್ ಬಂದಿದೆ ಎಂದು ಪಾಕಿಸ್ತಾನ ಸರ್ಕಾರದ ಮೂಲಗಳು ತಿಳಿಸಿವೆ.