ಇಸ್ಲಮಾಬಾದ್: ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಕತಾರ್‌ನ ಶೇಖ್ ತಮೀಮ್ ಬಿನ್ ಹಮದ್ ಅಲ್ - ಥಾನಿಯ ಎಮಿರ್ ಅವರನ್ನು ಇಂದು ದೋಹಾದಲ್ಲಿ ಭೇಟಿಯಾಗಿದ್ದು, ಕೊಲ್ಲಿ ರಾಷ್ಟ್ರದಲ್ಲಿನ ಯುಎಸ್ ಮತ್ತು ತಾಲಿಬಾನ್ ಶಾಂತಿ ಒಪ್ಪಂದಕ್ಕೆ ಸಹಿಹಾಕಲು ಈ ರಾಷ್ಟ್ರಗಳು ಸಿದ್ಧವಾಗಿವೆ.
ಕತಾರ್‌ನ ಇಂಧನ ಸಚಿವ ಸಾದ್ ಶೀರ್ದಾ ಅಲ್ - ಕಾಬಿರವರು ಖಾನ್ ಅವರನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ಇನ್ನೂ ತೆಹ್ರೀಕ್- ಇ - ಇನ್ಸಾಫ್ ಪಕ್ಷವು ಟ್ವೀಟ್ ಮೂಲಕ ಸಭೆಯ ಕಿರು ವಿಡಿಯೋವನ್ನು ಹಂಚಿಕೊಂಡಿದೆ.
ಪಾಕ್ ಪ್ರಧಾನಿ 2018ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಕತಾರ್ಗೆ ಇದು ಎರಡನೆಯ ಭೇಟಿಯಾಗಿದೆ. ಇನ್ನು ಕತಾರ್‌ನ ಎಮಿರ್ ಜೂನ್ 2019ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದು, ದ್ವಿಪಕ್ಷೀಯ ಆರ್ಥಿಕ ಸಹಯೋಗವನ್ನು ಬಲಪಡಿಸಲು ಸಾಧ್ಯವಾಯಿತು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಫ್ಘಾನಿಸ್ತಾನದಾದ್ಯಂತ ಒಂದು ವಾರದಿಂದ ನಡೆಯುತ್ತಿರುವ ಹಿಂಸಾಚಾರ, ಗಲಭೆ ತಡೆಯುವ ನಿಟ್ಟಿನಲ್ಲಿ, ಶನಿವಾರದಂದು ಯುಎಸ್ - ತಾಲಿಬಾನ್ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲು ಸಿದ್ಧವಾಗಿದ್ದು, ಇಂದು ಎರಡೂ ದೇಶಗಳ ಗಣ್ಯರು ಭೇಟಿಯಾಗಿದ್ದಾರೆ. ಶಾಂತಿ ಬಪ್ಪಂದಕ್ಕೆ ಸಹಿ ಹಾಕಲಾಗುವುದು ಎಂದು ತಾಲಿಬಾನ್ ಸ್ಪಷ್ಟಪಡಿಸಿದೆ. ಅಲ್ಲದೇ ಶಾಂತಿ ಒಪ್ಪಂದಕ್ಕೆ ಅಪಾರ ಬೆಂಬಲ ದೊರೆತಿದೆಯೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದಲ್ಲಿ ಸೋಮವಾರ ತಿಳಿಸಿದ್ದರು.
ದೋಹಾದಲ್ಲಿ ನಡೆಯಲಿರುವ ಶಾಂತಿ ಒಪ್ಪಂದ ಸಮಾರಂಭದಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ ಅವರನ್ನ ಕತಾರ್ ಆಹ್ವಾನಿಸಿದೆ. 18 ವರ್ಷಗಳಿಗಿಂತ ಹೆಚ್ಚು ಕಾಲದಿಂದ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸುವ ಸಲುವಾಗಿ ಯುಎಸ್ ಮತ್ತು ಅಫ್ಘಾನ್ ತಾಲಿಬಾನ್ ಶಾಂತಿ ಒಪ್ಪಂದವಾಗುತ್ತಿದೆ.
ಇನ್ನೂ ಅಫ್ಘಾನಿಸ್ತಾನ ವಿಶ್ವದ ಅತ್ಯಂತ ಬಡ ದೇಶಗಳಲ್ಲಿ ಒಂದಾಗಿದ್ದು, ಅನೇಕ ಸಮಸ್ಯೆಗಳಿವೆ. ಈ ಶಾಂತಿ ಒಪ್ಪಂದದಿಂದ ಬದಲಾವಣೆಗಳಾಗಬಹುದೆಂಬ ನಿರೀಕ್ಷೆಯಲ್ಲಿ ಎರಡೂ ದೇಶಗಳಿವೆ.