ಇಸ್ಲಾಮಾಬಾದ್: ಪಾಕಿಸ್ತಾನ ಆರ್ಥವ್ಯವಸ್ಥೆಯ ಚಿತ್ರಣ ಅತ್ಯಂತ ಕೆಟ್ಟದಾಗಿದ್ದು, ಆರ್ಥಿಕ ಗುರಿ ಈಡೇರಿಕೆಯ ಎಲ್ಲ ಬಾಗಿಲುಗಳು ಮುಚ್ಚಿವೆ ಎಂದು ಇಲ್ಲಿನ ಪತ್ರಿಕೆಯು ಸಮೀಕ್ಷೆಯೊಂದನ್ನು ಆಧರಿಸಿ ವರದಿ ಮಾಡಿದೆ.
2018-19ರ ಸಾಲಿನ ಪಾಕಿಸ್ತಾನದ ಆರ್ಥಿಕ ಬೆಳವಣಿಗೆ ಆಧರಿಸಿ ಜೂನ್ 11ರಂದು ಬಿಡುಗಡೆಯಾಗಲಿರುವ ಆರ್ಥಿಕ ಸಮೀಕ್ಷೆ ವರದಿಯ ಅನ್ವಯ, ಪ್ರಸ್ತುತ ವರ್ಷದಲ್ಲಿ ಪಾಕ್ನ ಆರ್ಥಿಕ ಬೆಳವಣಿಗೆ ದರ ಶೇ 3.3ಕ್ಕೆ ಇಳಿಕೆಯಾಗಿದೆ. ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಇದು ಶೇ 6.3ರಷ್ಟು ಇತ್ತು ಎಂದು ಹೇಳಿದೆ.
ಪ್ರಧಾನಿ ಇಮ್ರಾನ್ ಖಾನ್ ಅವರ ಆಡಳಿತಾವಧಿಯಲ್ಲಿ ಅರ್ಥವ್ಯವಸ್ಥೆಯ ಎಲ್ಲ ವಲಯಗಳೂ ನಿಷ್ಕ್ರಿಯಗೊಂಡಿದ್ದು, ಆರ್ಥಿಕತೆಗೆ ಬಲ ತುಂಬುವಲ್ಲಿ ಅವುಗಳು ವಿಫಲವಾಗಿವೆ. ದೇಶದ ಆರ್ಥಿಕ ಶಕ್ತಿಯನ್ನು ಮರುಸ್ಥಾಪಿಸುವುದಾಗಿ ಭರವಸೆ ನೀಡಿ 2018ರಲ್ಲಿ ಅಧಿಕಾರಕ್ಕೆ ಬಂದ ಇಮ್ರಾನ್ ಖಾನ್, ಉದ್ದೇಶಿತ ಗುರಿ ಈಡೇರಿಸುವಲ್ಲಿ ಎಡವಿದ್ದಾರೆ. ಈ ಹಿಂದೆ ಶೇ 7.6ರಷ್ಟು ಬೆಳವಣಿಗೆ ದರವಿದ್ದ ಕೈಗಾರಿಕಾ ವಲಯ, ಪ್ರಸ್ತುತ ಶೇ 1.4ರಷ್ಟು ಬೆಳವಣಿಗೆ ಕಾಣುತ್ತಿರುವುದು ಇದಕ್ಕೆ ನಿದರ್ಶನ ಎಂದು ವರದಿ ತಿಳಿಸಿದೆ.
ಶೇ 6.5ರಷ್ಟಿದ್ದ ಸೇವಾ ವಲಯದ ಬೆಳವಣಿಗೆ ದರ ಶೇ 4.7ರಲ್ಲಿ ಸಾಗುತ್ತಿದೆ. ಶೇ 10ರಷ್ಟು ಬೆಳವಣಿಗೆ ಗುರಿ ಇರಿಸಿಕೊಂಡ ನಿರ್ಮಾಣ ವಲಯ ಮಾತ್ರ ಶೇ 7.6ರಷ್ಟು ಬೆಳವಣಿಗೆ ವೃದ್ಧಿಯಿಂದ ಸಾಧಾರಣ ಚೇತರಿಕೆ ಕಂಡಿದೆ.ಆಹಾರ ಉತ್ಪಾದನಾ ವಲಯ ಶೇ 0.8ರಷ್ಟು ಬೆಳವಣಿಗೆಯಲ್ಲಿ ಮುಂದುವರಿಯುತ್ತಿದೆ ಎಂಬ ವಿಚಾರಗಳು ವರದಿಯಲ್ಲಿದೆ.