ಕಾಬೂಲ್: ಆಫ್ಘನ್ ವಾಯುಪಡೆಯ ವೈಮಾನಿಕ ದಾಳಿಯಲ್ಲಿ ಸುಮಾರು 30ಕ್ಕೂ ಹೆಚ್ಚು ತಾಲಿಬಾನ್ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಮತ್ತು 17 ಮಂದಿ ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನ್ ರಕ್ಷಣಾ ಸಚಿವಾಲಯ ದೃಢಪಡಿಸಿದೆ.
ಉತ್ತರ ಜಾವ್ಜಾನ್ ಪ್ರಾಂತ್ಯದಲ್ಲಿ, ಪ್ರಾಂತೀಯ ರಾಜಧಾನಿ ಶಿಬರ್ಗಾನ್ ಹೊರವಲಯದಲ್ಲಿರುವ ಮುರ್ಗಾಬ್ ಮತ್ತು ಹಸನ್ ತಬ್ಬಿನ್ ಗ್ರಾಮಗಳಲ್ಲಿ ಯುದ್ಧ ವಿಮಾನಗಳು ಭಯೋತ್ಪಾದಕ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ನಡೆಸಿದ್ದ ದಾಳಿಯಲ್ಲಿ 19 ಭಯೋತ್ಪಾದಕರು ಸಾವನ್ನಪ್ಪಿದರು ಮತ್ತು 15 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.
ಜೊತೆಗೆ ದಕ್ಷಿಣ ಹೆಲ್ಮಾಂಡ್ ಪ್ರಾಂತ್ಯದ ರಾಜಧಾನಿ ಲಷ್ಕರ್ ಗಹ್ ಹೊರವಲಯದಲ್ಲಿ ವಾಯುಪಡೆಯ ನಡೆಸಿದ್ದ ದಾಳಿಯಲ್ಲಿ 14 ತಾಲಿಬಾನ್ ಉಗ್ರರು ಹಾಗೂ ಇಬ್ಬರು ಆಫ್ಘನ್ಗಳಲ್ಲದ ಉಗ್ರರು ಮೃತಪಟ್ಟಿದ್ದಾರೆ. ಮೂರು ಭಯೋತ್ಪಾದಕರ ವಾಹನಗಳು, ಆರು ಮೋಟರ್ ಸೈಕಲ್‌ಗಳು, ಎರಡು ಬಂಕರ್‌ಗಳು ಮತ್ತು ಅವರ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಸಹ ನಾಶಪಡಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಆಫ್ಘನ್ನಲ್ಲಿ ಹಿಂಸಾಚಾರ ಪ್ರಕರಣ ಹೆಚ್ಚುತ್ತಿದ್ದು, ಹೀಗಾಗಿ ವೈಮಾನಿಕ ದಾಳಿಗಳು ನಡೆಯುತ್ತಿವೆ.