ಜಕಾರ್ತಾ: ವಿಶ್ವದ ಅತಿದೊಡ್ಡ ಏಕದಿನ ಚುನಾವಣೆ ಎಂದು ಕರೆಸಿಕೊಂಡ ಇಂಡೋನೇಷ್ಯಾದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆ ಕಳಂಕವನ್ನೂ ಹೊತ್ತುಕೊಂಡಿದೆ. 10 ದಿನಗಳ ಬಳಿಕ ಫಲಿತಾಂಶದ ವೇಳೆ 272 ಚುನಾವಣಾ ಸಿಬ್ಬಂದಿ ಸಾವಿಗೀಡಾಗಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಹೌದು, ಬೃಹತ್ ಚುನಾವಣೆಯ ನಂತರ ಸುದೀರ್ಘ ಕಾಲದವರೆಗೆ ಮತಪತ್ರಗಳನ್ನು ಕೈಯಿಂದಲೇ ಎಣಿಸಿದ್ದ ಚುನಾವಣಾ ಸಿಬ್ಬಂದಿ ಆಯಾಸದಿಂದಲೇ ಸಾವನ್ನಪ್ಪಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಚುನಾವಣೆಗೆ ತಗುಲುವ ಅಧಿಕ ವೆಚ್ಚ ಕಡಿಮೆಗೊಳಿಸುವ ಉದ್ದೇಶದಿಂದ ಎಪ್ರಿಲ್ 17ರಂದು ಒಂದೇ ದಿನ ರಾಷ್ಟ್ರ ಹಾಗೂ ಪ್ರಾಂಥೀಯ ಸಂಸತ್ ಚುನಾವಣೆ ನಡೆಸಲಾಗಿತ್ತು. ದೇಶದ 260 ಮಿಲಿಯನ್ ಮತದಾರರಲ್ಲಿ 193 ಮಿಲಿಯನ್ ಮತದಾರರು ತಮ್ಮ ಹಕ್ಕು ಚಲಾಯಿಸುವ ಮೂಲಕ ಶೇ. 80ರಷ್ಟು ಮತದಾನ ದಾಖಲೆ ಬರೆದಿದ್ದರು. 8 ಲಕ್ಷ ಮತಗಟ್ಟೆಗಳಲ್ಲಿ ಮತಪತ್ರಗಳ ಮೂಲಕ ಶಾಂತಿಯುತ ಚುನಾವಣೆ ನಡೆದಿತ್ತು.
ಇಷ್ಟೊಂದು ಮತಪತ್ರಗಳನ್ನು ಕೈಯಿಂದ ಎಣಿಸುವುದು ಸುಲಭದ ಮಾತಾಗಿರಲಿಲ್ಲ. ಮತಪತ್ರಗಳನ್ನು ಎಣಿಸಿ ಚುನಾವಣಾ ಸಿಬ್ಬಂದಿ ತೀವ್ರ ಅಸ್ವಸ್ಥರಾಗಿದ್ದರು. ಶನಿವಾರ ರಾತ್ರಿವರೆಗೆ 272 ಸಿಬ್ಬಂದಿ ಮೃತಪಟ್ಟಿದ್ದಾರೆ. ಅಲ್ಲದೆ, 1,878 ಸಿಬ್ಬಂದಿ ಇನ್ನೂ ಅಸ್ವಸ್ಥರಾಗಿಯೇ ಇದ್ದಾರೆ ಎಂದು ಜನರಲ್ ಎಲೆಕ್ಸನ್ ಕಮಿಷನ್ನ ವಕ್ತಾರ ಆರಿಫ್ ಪ್ರಿಯೊ ಸುಸಾಂತೊ ಹೇಳಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ.