ಬೀಜಿಂಗ್ : ನಮ್ಮ ಪಡೆಗಳು ಭಾರತ-ಚೀನಾ ಗಡಿ ಪ್ರದೇಶದಲ್ಲಿ ಶಾಂತಿ ಕಾಪಾಡಲು ಬದ್ಧವಾಗಿವೆ. ಆದರೆ, ಗಡಿ ಪರಿಸ್ಥಿತಿಯನ್ನು ಉಲ್ಬಣಗೊಳಿಸಬಹುದಾದ ಯೋಜನೆಯಿದ್ದರೆ ಭಾರತ ಅದನ್ನು ಅರ್ಧಕ್ಕೇ ಕೈಬಿಡಬೇಕು ಎಂದು ಚೀನಾ ಆಗ್ರಹಿಸಿದೆ.
ಕಳೆದ ವಾರ ಉತ್ತರ ಸಿಕ್ಕಿಂನ ನಾಕು ಲಾ ಗಡಿಭಾಗದಲ್ಲಿನ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಬಳಿ ಭಾರತ ಹಾಗೂ ಚೀನಾ ಸೈನಿಕರ ನಡುವೆ ಘರ್ಷಣೆ ನಡೆದಿರುವುದು ಇಂದು ಬೆಳಕಿಗೆ ಬಂದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಚೀನಾ ಸೇನೆ, ಜನವರಿ 20ರಂದು ಭಾರತೀಯ ಸೇನೆ ಮತ್ತು ಪೀಪಲ್ಸ್ ಲಿಬರೇಷನ್ ಪಡೆ (ಪಿಎಲ್ಎ) ನಡುವೆ ಸಣ್ಣ ಮಟ್ಟದಲ್ಲಿ ಘರ್ಷಣೆ ನಡೆದಿದ್ದು, ಇದನ್ನೂ ಅಂದೇ ಸ್ಥಳೀಯ ಕಮಾಂಡರ್ಗಳೇ ಬಗೆಹರಿಸಿದ್ದಾರೆ ಎಂದು ಹೇಳಿತ್ತು.
ಇದನ್ನೂ ಓದಿ: ಸಿಕ್ಕಿಂನಲ್ಲಿ ಭಾರತ-ಚೀನಾ ಸೈನಿಕರ ನಡುವೆ ನಡೆದಿತ್ತು ಸಂಘರ್ಷ: ಸ್ಫೋಟಕ ಮಾಹಿತಿ ಬಹಿರಂಗ
ಇದೀಗ ಈ ಕುರಿತು ಹೇಳಿಕೆ ನೀಡಿರುವ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲೈಜಿನ್, ಗಡಿ ಪರಿಸ್ಥಿತಿಯನ್ನು ಉಲ್ಬಣಗೊಳಿಸಬಹುದಾದ ಯಾವುದೇ ಏಕಪಕ್ಷೀಯ ಕ್ರಮಗಳಿಂದ ಭಾರತ ದೂರವಿರಲು ಹಾಗೂ ಅಂತಹ ಯೋಜನೆಯಿದ್ದರೆ ಅದನ್ನು ಅರ್ಧಕ್ಕೇ ಕೈಬಿಡಿ. ಬದಲಾಗಿ ಗಡಿಭಾಗಗಳಲ್ಲಿ ಶಾಂತಿ ಕಾಪಾಡಲು ಪ್ರಾಯೋಗಿಕ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಹೇಳಿದ್ದಾರೆ.
ನಿನ್ನೆಯಷ್ಟೇ 15 ಗಂಟೆಗಳಿಗಿಂತ ಹೆಚ್ಚು ಕಾಲ ಭಾರತ ಮತ್ತು ಚೀನಾ ನಡುವೆ ಕಾರ್ಪ್ಸ್ ಕಮಾಂಡರ್ ಮಟ್ಟದ ಮಹತ್ತರ ಸಭೆ ನಡೆದಿತ್ತು. ಇದರ ಬೆನ್ನಲ್ಲೇ ಸಿಕ್ಕಿಂನಲ್ಲಿ ಒಂದು ವಾರದ ಹಿಂದೆ ಸಂಘರ್ಷ ನಡೆದಿದೆ ಎಂಬ ವಿಚಾರ ಹೊರ ಬಂದಿತ್ತು. ಘಟನೆಯಲ್ಲಿ ಎರಡೂ ದೇಶಗಳ ಯೋಧರು ಗಾಯಗೊಂಡಿದ್ದಾರೆ.