ವಾಷಿಂಗ್ಟನ್(ಅಮೆರಿಕ): ಹೆಚ್ಚಿನ ಮಾಹಿತಿ ಇಲ್ಲದೇ ಕೊರೊನಾ ವೈರಸ್ನ ಮೂಲವನ್ನು ಖಚಿತವಾಗಿ ಪತ್ತೆ ಹಚ್ಚಲು ಸಾಧ್ಯವಿಲ್ಲ ಎಂದು ಅಮೆರಿಕದ ಇಂಟೆಲಿಜೆನ್ಸ್ ಕಮ್ಯೂನಿಟಿ (ಐಸಿ) ಶುಕ್ರವಾರ ಮಾಹಿತಿ ನೀಡಿದೆ.
ಜಗತ್ತಿನ ಹಲವು ರಾಷ್ಟ್ರಗಳು ಕೋವಿಡ್ ವೈರಸ್ನ ಮೂಲವನ್ನು ಪತ್ತೆಹಚ್ಚುವಲ್ಲಿ ನಿರತವಾಗಿವೆ. ವುಹಾನ್ ವೈರಾಲಜಿ ಲ್ಯಾಬ್‌ನಲ್ಲಿ ವೈರಸ್ ಸೋರಿಕೆಯಾಗಿ ಜಗತ್ತಿಗೆ ಹರಡಿರಬಹುದು ಎಂಬ ಊಹಾಪೋಹಗಳನ್ನು ಚೀನಾ ನಿರಾಕರಿಸಿದೆ.
ಮೇ ತಿಂಗಳಲ್ಲಿ, ಕೋವಿಡ್ ವೈರಸ್ ಮೂಲವನ್ನು ಪತ್ತೆ ಹಚ್ಚಲು ಇಂಟೆಲಿಜೆನ್ಸ್ ಕಮ್ಯೂನಿಟಿಯನ್ನು ಜೋ ಬೈಡನ್ ನೇಮಿಸಿದ್ದರು. ಇದಲ್ಲದೇ 90 ದಿನಗಳಲ್ಲಿ ಈ ಕುರಿತು ವರದಿ ನೀಡುವಂತೆ 17 ಪ್ರಮುಖ ಗುಪ್ತಚರ ಸಂಸ್ಥೆಗಳಿಗೆ ಬೈಡನ್ ನಿರ್ದೇಶನ ನೀಡಿದ್ದರು.
ಅಮೆರಿಕದ ಇಂಟೆಲಿಜೆನ್ಸ್ ಕಮ್ಯೂನಿಟಿ ಕೋವಿಡ್ ಮೂಲವನ್ನು ಪತ್ತೆಹಚ್ಚಲು ಈಗ ವಿಫಲವಾಗಿದೆ. ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ತಜ್ಞರು, ಕೋವಿಡ್ ಮೂಲದ ಬಗ್ಗೆ ಖಚಿತವಾದ ವಿವರಣೆ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.
ಕೆಲವು ದಿನಗಳ ಹಿಂದೆ ನೇಚರ್ ಜರ್ನಲ್‌ನಲ್ಲಿ ಪ್ರಕಟವಾದ ವರದಿಯಲ್ಲಿ ಚೀನಾದ ಅಧಿಕಾರಿಗಳು ಮೂಲ ಮಾಹಿತಿಯನ್ನು (ಕಚ್ಚಾ ಮಾಹಿತಿ) ಹಂಚಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಈ ವೇಳೆ ತುರ್ತು ಸಹಯೋಗದ ಅಗತ್ಯವಿದೆ. ಆದರೆ ಚೀನಾ ಕಚ್ಚಾ ಮಾಹಿತಿ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಸಂಶೋಧನೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ವಿಜ್ಞಾನಿಗಳು ಸ್ಪಷ್ಟನೆ ನೀಡಿದ್ದರು.
ಇದನ್ನೂ ಓದಿ: ಒಂದೇ ದಿನ 1 ಕೋಟಿಗೂ ಹೆಚ್ಚು ಜನರಿಗೆ ಕೋವಿಡ್ ಲಸಿಕೆ: ಹೊಸ ದಾಖಲೆ ಬರೆದ ಭಾರತ