ನವದೆಹಲಿ: ಭಾರತೀಯ ಸೇನೆಯ ಉತ್ತರ ವಿಭಾಗದ ಕಮಾಂಡರ್ ರಣಬೀರ್ ಸಿಂಗ್ ಐದು ದಿನಗಳ ಕಾಲ ಚೀನಾ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಅವರು, ಪಿಎಲ್ಎ ಕಮಾಂಡರ್ ಆಗಿರುವ ಹನ್ ವಿಗುವೋ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಈ ಭೇಟಿ ವೇಳೆ ಉಭಯ ಕಮಾಂಡರ್ಗಳು, ಭದ್ರತೆ ಹಾಗೂ ಎರಡು ದೇಶಗಳ ಸೇನೆಯ ಜಂಟಿ ತರಬೇತಿ ಮತ್ತು ಗಡಿಯಲ್ಲಿ ಉಂಟಾದ ಅಶಾಂತಿ ಬಗ್ಗೆ ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡಲು ಬೇಕಾದ ಕ್ರಮಗಳ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗ್ತಿದೆ.
ಭಾರತ ಸೇನೆಯ ಉತ್ತರ ಸೇನೆಯ ಕಮಾಂಡರ್ ರಣಬೀರ್ ಸಿಂಗ್ ಉನ್ನತ ಮಟ್ಟದ ಮಿಲಿಟರಿ ನಿಯೋಗವನ್ನು ಮುನ್ನಡೆಸುತ್ತಿದ್ದು, ಚೀನಾದ ಬೀಜಿಂಗ್, ಚೆಂಗ್ಡು, ಉರುಮ್ಕಿ ಮತ್ತು ಶಾಂಘೈನಲ್ಲಿರುವ ಪ್ರಮುಖ ಮಿಲಿಟರಿ ಸಂಸ್ಥೆಗಳಿಗೆ ಭೇಟಿ ನೀಡಿ ಅಲ್ಲಿನ ಸೇನೆಯೊಂದಿಗೆ ಅಭಿಪ್ರಾಯ ವಿನಿಮಯ ಮಾಡಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಮೆಘಾಲಯುದ ಪೂರ್ವ ಭಾಗದಲ್ಲಿ ಎರಡು ರಾಷ್ಟ್ರಗಳ ನಡುವೆ 'ಹ್ಯಾಂಡ್ ಇನ್ ಹ್ಯಾಂಡ್ 2019'(ಎರಡು ದೇಶದ ಮಿಲಿಟರಿ ಪಡೆಯ ಜಂಟಿ ಕವಾಯತು)ನಲ್ಲಿ ಉಭಯ ದೇಶಗಳು ಪರಸ್ಪರ ಸಮನ್ವಯ ಸಾಧಿಸಿದ್ದು, ಸ್ನೇಹ ಸಂಬಂಧವನ್ನು ವೃದ್ಧಿಸುವುದಾಗಿ ಕಮಾಂಡರ್ ರಣಬೀರ್ ಸಿಂಗ್ ಚೀನಾ ಭೇಟಿ ವೇಳೆ ತಿಳಿಸಿದ್ದಾರೆ.
ಲೆಫ್ಟಿನಂಟ್ ಜನರಲ್ ರಣಬೀರ್ ಸಿಂಗ್ ಚೀನಾಕ್ಕೆ ಎರಡನೇ ಬಾರಿ ಭೇಟಿ ನೀಡಿದ್ದು, ಈ ಮೊದಲು 2015ರಲ್ಲಿ ಭೇಟಿ ನೀಡಿದ್ದರು.
ಈ ಭೇಟಿ ಉಭಯ ದೇಶಗಳ ನಡುವಿನ ಪರಸ್ಪರ ಸಂಬಂಧವನ್ನು ಗಟ್ಟಿಗೊಳಿಸಲಿದ್ದು, ಎರಡು ದೇಶದ ಸೂಕ್ಷ್ಮ ಗಡಿಗಳನ್ನು ಸ್ಥಿರಗೊಳಿಸುವತ್ತ ಉನ್ನತ ಮಟ್ಟದ ಮಿಲಿಟರಿ ಸಹಕಾರ ದೊರೆಯಲಿದೆ ಎಂದು ಕಮಾಂಡರ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.