ಕಠ್ಮಂಡು: ನೇಪಾಳ ತನ್ನ ಉದ್ಧಟತನ ಮುಂದುವರಿಸಿದೆ. ಭಾರತದ ಭೂ ಭಾಗಗಳನ್ನು ಒಳಗೊಂಡಿರುವ ಪರಿಷ್ಕೃತ ನಕ್ಷೆಯನ್ನು ಈ ತಿಂಗಳ ಮಧ್ಯದಲ್ಲಿ ಗೂಗಲ್ ಮತ್ತು ಅಂತಾರಾಷ್ಟ್ರೀಯ ಸಮುದಾಯಕ್ಕೆ ಕಳುಹಿಸಲು ನೇಪಾಳ ಉದ್ದೇಶಿಸಿದೆ. ನೂತನ ನಕ್ಷೆಯಲ್ಲಿ ಭಾರತದ ಭೂಪ್ರದೇಶಗಳಾದ ಲಿಂಪಿಯಾಧುರಾ, ಲಿಪುಲೇಖ್ ಮತ್ತು ಕಾಲಾಪಾಣಿ ಸೇರಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ನೇಪಾಳದ ಭೂ ನಿರ್ವಹಣೆ, ಸಹಕಾರ ಮತ್ತು ಬಡತನ ನಿವಾರಣಾ ಸಚಿವ ಪದ್ಮ ಆರ್ಯಲ್, "ನಾವು ಕಾಲಾಪಾಣಿ, ಲಿಪುಲೆಖ್ ಮತ್ತು ಲಿಂಪಿಯಾದುರಾ ಒಳಗೊಂಡಿರುವ ಪರಿಷ್ಕೃತ ನಕ್ಷೆಯನ್ನು ವಿಶ್ವ ಸಂಸ್ಥೆಯ ವಿವಿಧ ಎಜೆನ್ಸಿಗಳು ಮತ್ತು ಭಾರತ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಕಳುಹಿಸುತ್ತೇವೆ. ಈ ತಿಂಗಳ ಮಧ್ಯದಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ" ಎಂದು ತಿಳಿಸಿದ್ದಾರೆ.
ನವೀಕೃತ ನಕ್ಷೆಯ 4 ಸಾವಿರ ಪ್ರತಿಗಳನ್ನು ಇಂಗ್ಲಿಷ್ ಭಾಷೆಯಲ್ಲಿ ಮುದ್ರಿಸಿ ಅಂತಾರಾಷ್ಟ್ರೀಯ ಸಮುದಾಯಕ್ಕೆ ಕಳುಹಿಸುವಂತೆ ಸಚಿವಾಲಯ ಮಾಪನ ಇಲಾಖೆಗೆ ಸೂಚಿಸಿದೆ. ಈಗಾಗಲೇ ಮಾಪನ ಇಲಾಖೆ ಪರಿಷ್ಕೃತ ನಕ್ಷೆಯ 25 ಸಾವಿರ ಪ್ರತಿಗಳನ್ನು ಮುದ್ರಿಸಿ, ಪ್ರಾಂತೀಯ ಕಚೇರಿಗಳು, ಎಲ್ಲಾ ಸಾರ್ವಜನಿಕ ಕಚೇರಿಗಳು ಸೇರಿದಂತೆ ರಾಷ್ಟ್ರದಾದ್ಯಂತ ವಿತರಿಸಿದೆ.
ವಿವಾದಿತ ಪ್ರದೇಶಗಳಾದ ಲಿಂಪಿಯಾದುರಾ, ಲಿಪುಲೇಖ್ ಮತ್ತು ಕಲಾಪಾನಿಗಳನ್ನು ಒಳಗೊಂಡ ಪರಿಷ್ಕೃತ ರಾಜಕೀಯ ಮತ್ತು ಆಡಳಿತಾತ್ಮಕ ನಕ್ಷೆಯನ್ನು ನೇಪಾಳ ಸರ್ಕಾರ ಮೇ 20 ರಂದು ಬಿಡುಗಡೆ ಮಾಡಿತ್ತು. ನೇಪಾಳದ ಏಕಪಕ್ಷೀಯ ನಿರ್ಧಾರಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ರಾಜತಾಂತ್ರಿಕ ಮಾತುಕತೆಗಳ ಮೂಲಕ ಬಾಕಿ ಉಳಿದಿರುವ ಗಡಿ ಸಮಸ್ಯೆಗಳನ್ನು ಪರಿಹರಿಸುವ ದ್ವಿಪಕ್ಷೀಯ ನಿಯಮಕ್ಕೆ ಈ ಕ್ರಮವು ವಿರುದ್ಧವಾಗಿದೆ ಎಂದು ಭಾರತ ಹೇಳಿದ್ದು, ನೇಪಾಳದ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳುವುದಿಲ್ಲ ಎಂದು ಖಡಕ್ ಸಂದೇಶ ರವಾನಿಸಿದೆ.