ಕೊಲಂಬೊ(ಶ್ರೀಲಂಕಾ) : ಕೊಲಂಬೊ ಬಂದರಿನಿಂದ ಸಮುದ್ರದಲ್ಲಿ ಎಕ್ಸ್-ಪ್ರೆಸ್ ಪರ್ಲ್ ಸರಕು ಹಡಗು ಸುಟ್ಟುಹೋದ ನಂತರ ಶ್ರೀಲಂಕಾದ ಪಶ್ಚಿಮ ಕರಾವಳಿಯಲ್ಲಿ 5 ಡಾಲ್ಫಿನ್ ಮತ್ತು 31 ಸಮುದ್ರ ಆಮೆಗಳ ಶವಗಳು ಪತ್ತೆಯಾಗಿವೆ ಎಂದು ಶ್ರೀಲಂಕಾದ ವನ್ಯಜೀವಿ ಸಂರಕ್ಷಣಾ ಇಲಾಖೆ ತಿಳಿಸಿದೆ. ರಾಜಧಾನಿ ಕೊಲಂಬೊದಿಂದ ದಕ್ಷಿಣದ ಕೊಸ್ಗೋಡಾದ ಕರಾವಳಿಯಾದ್ಯಂತ ಶವಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.
ಆಮೆಗಳ ಮೃತದೇಹವನ್ನು ಹೆಚ್ಚಿನ ತನಿಖೆಗಾಗಿ ಸರ್ಕಾರಿ ವಿಶ್ಲೇಷಕರಿಗೆ ಕಳುಹಿಸಲಾಗಿದೆ ಎಂದು ವನ್ಯಜೀವಿ ವಿಭಾಗದ ಮಹಾನಿರ್ದೇಶಕ ಚಂದನಾ ಸೂರ್ಯಬಂದರ ತಿಳಿಸಿದ್ದಾರೆ. ಸಂಬಂಧಿತ ಅಂಗಾಂಶದ ತುಣುಕುಗಳು ಸೇರಿದಂತೆ ಮಾದರಿಗಳನ್ನು ಇನ್ನೂ ಸ್ವೀಕರಿಸಲಾಗುತ್ತಿದೆ ಎಂದು ಸರ್ಕಾರಿ ವಿಶ್ಲೇಷಕರ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೂರ್ಣ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಅಧಿಕಾರಿ ಹೇಳಿದರು. ಎಕ್ಸ್-ಪ್ರೆಸ್ ಪರ್ಲ್ ಹಡಗು ಸಿಂಗಾಪುರದಡಿಯಲ್ಲಿ ನೋಂದಾಯಿಸಲ್ಪಟ್ಟಿದೆ ಮತ್ತು ಮೇ 15ರಂದು ಭಾರತದ ಹಜೀರಾ ಬಂದರಿನಿಂದ 25 ಟನ್ ನೈಟ್ರಿಕ್ ಆಮ್ಲ ಮತ್ತು ಹಲವಾರು ರಾಸಾಯನಿಕಗಳು ಮತ್ತು ಸೌಂದರ್ಯವರ್ಧಕಗಳನ್ನು ಹೊಂದಿರುವ 1,486 ಕಂಟೈನರ್ಗಳನ್ನು ಸಾಗಿಸುತ್ತಿತ್ತು.
ಮೇ 20ರಂದು ಕೊಲಂಬೊ ಬಂದರಿನ ಸಮೀಪ ಪ್ರಯಾಣ ಮಾಡುವಾಗ ಹಡಗಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿತು. ಇದರಿಂದಾಗಿ ಭಾರೀ ಪರಿಸರ ವಿಕೋಪ ಸಂಭವಿಸಿದೆ ಎಂದು ಸಮುದ್ರ ಪರಿಸರ ಸಂರಕ್ಷಣಾ ಪ್ರಾಧಿಕಾರ ತಿಳಿಸಿದೆ. ಬೆಂಕಿಯ ಕಾರಣಕ್ಕೆ ಕ್ರಿಮಿನಲ್ ತನಿಖೆ ನಡೆಯುತ್ತಿದೆ.