ಇಸ್ಲಮಾಬಾದ್: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸುವ ಮೂಲಕ ಪ್ರಧಾನಿ ಮೋದಿ ಮಾರಣಾಂತಿಕ ತಪ್ಪು ಮಾಡಿದ್ದಾರೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಆರೋಪಿಸಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರದ ಮುಜಾಫರಬಾದ್ನಲ್ಲಿ ಮಾತನಾಡಿರುವ ಇಮ್ರಾನ್ ಖಾನ್, ಮೋದಿ ಪಾಕಿಸ್ತಾನವನ್ನ ಚುನಾವಣೆ ವಿಚಾರವಾಗಿ ಬಳಿಸಿಕೊಂಡಿದ್ದರಿಂದ ಮತ್ತೊಮ್ಮೆ ಜನಾದೇಶ ಪಡೆದುಕೊಂಡಿದ್ದಾರೆ. ಹೀಗಾಗಿ ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದಾರೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.
ಮೋದಿ ಮಾರಣಾಂತಿಕ ತಪ್ಪು ಮಾಡಿದ್ದಾರೆ, ಈಗ ಇಟ್ಟಿರುವ ಹೆಜ್ಜೆಯಿಂದ ಹಿಂದೆ ಸರಿಯಲು ಸಾಧ್ಯವಿಲ್ಲ. ಭಾರತದಲ್ಲಿ ಹಿಂದೂ ರಾಷ್ಟ್ರೀಯತೆಯ ಜೀನ್ ತಾರಕಕ್ಕೇರಿದ್ದು ಅದನ್ನ ನಿಯಂತ್ರಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಕಳೆದ ವರ್ಷ ಆಗಸ್ಟ್ 5 ರಂದು ಮೋದಿ ಕೈಗೊಂಡ ಕ್ರಮದ ನಂತರ ಕಾಶ್ಮೀರ ಸ್ವತಂತ್ರವಾಗುತ್ತದೆ ಎಂಬುದು ನನ್ನ ನಂಬಿಕೆ. ಮೋದಿ ಈ ಕ್ರಮ ಕೈಗೊಳ್ಳದಿದ್ದರೆ, ಪ್ರಪಂಚಕ್ಕೆ ವಿಷಯ ತಿಳಿಸಲು ಸಾಧ್ಯವಾಗುತ್ತಿರಲಿಲ್ಲ. ಜಗತ್ತಿಗೆ ಮೋದಿ ತೆಗೆದುಕೊಂಡ ಕ್ರಮದ ಬಗ್ಗೆ ತಿಳಿಸುವುದು ನಮ್ಮ ಕರ್ತವ್ಯ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.
ಕಳೆದ ತಿಂಗಳು ನವದೆಹಲಿಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಪಾಕಿಸ್ತಾನವನ್ನ ಸೋಲಿಸಲು ನಮ್ಮ ಸೇನೆ ಒಂದು ವಾರ ಅಥವಾ 10 ದಿನಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಇಮ್ರಾನ್ ಖಾನ್, 'ಒಬ್ಬ ಸಾಮಾನ್ಯ ವ್ಯಕ್ತಿ ಇಂತ ಹೇಳಿಕೆ ನೀಡಲು ಸಾಧ್ಯವಿಲ್ಲ' ಎಂದಿದ್ದಾರೆ.
ವಿಶ್ವದ ಗಮನವನ್ನು ಕಾಶ್ಮೀರದಿಂದ ಬೇರೆಡೆಗೆ ತಿರುಗಿಸಲು ಪಾಕಿಸ್ತಾನ, ಭಾರತಕ್ಕೆ ಯಾವುದೇ ಅವಕಾಶ ನೀಡಬಾರದು. 'ಒಂದೋ ಅವರು ಭಯೋತ್ಪಾದನೆ ಬೆದರಿಕೆಯನ್ನು ಬಳಸಿಕೊಂಡು ಸುಳ್ಳು ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತಾರೆ ಅಥವಾ ಕಾಶ್ಮೀರದಲ್ಲಿ ಜನರ ನಿಗ್ರಹವನ್ನ ಪ್ರಾರಂಭಿಸುತ್ತಾರೆ' ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.