ಇಸ್ಲಾಮಾಬಾದ್ (ಪಾಕಿಸ್ತಾನ) : ಗುರುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಪಾಕಿಸ್ತಾನದ ಸಿಂಧ್‌ನ ಜಮ್‌ಶೋರೊ ನಿವಾಸಿಗಳು ಆಕಾಶದಿಂದ ಕೆಳಕ್ಕೆ ಬೀಳುತ್ತಿರುವ ಅಪರಿಚಿತ ವಸ್ತುವನ್ನು ನೋಡಿದ್ದಾರೆ. ಆ ವಸ್ತುವು ರಾಕೆಟ್ ಅಥವಾ ಕ್ಷಿಪಣಿಯಂತೆ ಕಾಣುತ್ತಿತ್ತು ಎಂಬುದು ಪ್ರತ್ಯಕ್ಷದರ್ಶಿಗಳ ಮಾತಾಗಿತ್ತು. ಅಷ್ಟರಲ್ಲೇ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡಾ ಆಗಿತ್ತು.
ಸಾಮಾಜಿಕ ಮಾಧ್ಯಮದಿಂದ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಇದು ಆಬ್ಜೆಕ್ಟ್ ಕ್ಷಿಪಣಿಯಾಗಿದ್ದು, ಬೆಳಗ್ಗೆ 11 ಗಂಟೆಗೆ ಕ್ಷಿಪಣಿಯ ಪರೀಕ್ಷೆಯನ್ನು ನಿಗದಿಪಡಿಸಲಾಗಿತ್ತು. ಆದ್ರೆ ಟ್ರಾನ್ಸ್‌ಪೋರ್ಟರ್ ಎರೆಕ್ಟರ್ ಲಾಂಚರ್ (TEL) ದೋಷದಿಂದಾಗಿ ಒಂದು ಗಂಟೆ ಉಡ್ಡಯನ ಮುಂದೂಡಲಾಗಿತ್ತು. ಅಂತಿಮವಾಗಿ ಮಧ್ಯಾಹ್ನ 12 ಗಂಟೆಗೆ ಪಾಕಿಸ್ತಾನವು ಸಿಂಧ್‌ನಲ್ಲಿನ ತನ್ನ ಪರೀಕ್ಷಾ ಕೇಂದ್ರದಿಂದ ಈ ಮಿಸೈಲ್ ಉಡಾವಣೆ ಮಾಡಿತ್ತು ಎಂದು ತಿಳಿದು ಬಂದಿದೆ.
ಈ ಮಿಸೈಲ್ ಉಡಾವಣೆಯಾದ ಕೆಲವೇ ಸೆಕೆಂಡುಗಳಲ್ಲಿ ಸಿಂಧ್‌ನ ಥಾನಾ ಬುಲಾ ಖಾನ್ ಬಳಿ ಪತನವಾಗಿದೆ. ಪಾಕಿಸ್ತಾನದ ಕೆಲವು ಸುದ್ದಿ ವಾಹಿನಿಗಳು ಈ ಘಟನೆಯನ್ನು ಪ್ರಸಾರ ಕೂಡಾ ಮಾಡಿದ್ದವು. ಆದರೆ, ಆ ದೇಶದ ಅಧಿಕಾರಿಗಳು ಈ ಬಗ್ಗೆ ಮೌನ ವಹಿಸಿದ್ದಾರೆ. ಪಾಕಿಸ್ತಾನದ ಸಾಮಾಜಿಕ ಮಾಧ್ಯಮ ಖಾತೆಗಳ ಪ್ರಕಾರ, ಸ್ಥಳೀಯ ಆಡಳಿತವು ಅಂತಹ ಯಾವುದೇ ಹೇಳಿಕೆಗಳನ್ನು ನೀಡಲು ನಿರಾಕರಿಸಿದೆ. ಇದು ಸಾಮಾನ್ಯ ಮಾರ್ಟರ್ ಟ್ರೇಸರ್ ರೌಂಡ್. ಇದನ್ನು ಹತ್ತಿರದ ಕೇಂದ್ರದಿಂದ ಹಾರಿಸಲಾಗಿದೆ ಎಂದು ಹೇಳಿದೆ.
ಓದಿ: ರಾಕೆಟ್ ದಾಳಿಗೆ ಖ್ಯಾತ ಉಕ್ರೇನಿಯನ್ ನಟಿ ಬಲಿ: ಮುಂದುವರಿದ ರಷ್ಯಾ ದಾಳಿ!
ಗರಿಷ್ಠ 5 ಕಿ.ಮೀ ವ್ಯಾಪ್ತಿ ಹೊಂದಿರುವ ಮಾರ್ಟರ್ ಟ್ರೇಸರ್ ಕ್ಷಿಪಣಿ ಅತಿ ಎತ್ತರಕ್ಕೆ ಏರುವ ಸಾಧ್ಯತೆಯಿಲ್ಲ. ಆದರೆ ಸಿಂಧ್ ಪ್ರಾಂತ್ಯದ ಜಮ್ಶೋರೊದಲ್ಲಿ ಆಕಾಶದಿಂದ ಕ್ಷಿಪಣಿ ಬೀಳುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಭಾರತಕ್ಕೆ ಪ್ರತ್ಯುತ್ತರ ಕೊಡಲು ಹೋಗಿತ್ತೇ ಪಾಕ್?:
ಇತ್ತೀಚೆಗೆಷ್ಟೇ ಭಾರತದ ಬ್ರಹ್ಮೋಸ್ಮ ಕ್ಷಿಪಣಿ ಮಿಸ್ ಫೈರ್ ಆಗಿ ಪಾಕಿಸ್ತಾನದ ಭೂ ಪ್ರದೇಶದೊಳಗೆ ಬಿದ್ದಿತ್ತು. ಈ ಬಗ್ಗೆ ಪಾಕ್ ಆಕ್ಷೇಪ ಕೂಡಾ ವ್ಯಕ್ತಪಡಿಸಿತ್ತು. ಭಾರತ ತನ್ನದೇ ತಪ್ಪಿನಿಂದಾಗಿ ಕ್ಷಿಪಣಿ ಹಾರಿದೆ ಎಂದು ಸ್ಪಷ್ಟನೆ ಕೂಡಾ ಕೊಟ್ಟಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವು ಈ ಕ್ಷಿಪಣಿ ಪರೀಕ್ಷೆಯನ್ನು ನಡೆಸಿರಬಹುದು ಎಂದು ಪಾಕಿಸ್ತಾನದ ಕೆಲ ನ್ಯೂಸ್ ಚಾನೆಲ್ಗಳು ವರದಿ ಮಾಡಿವೆ.
ಇನ್ನು ಪಾಕ್ ಡೆಪ್ಯುಟಿ ಕಮಿಷನರ್ ಈ ಬಗ್ಗೆ ಮಾತನಾಡಿ, ಜಮ್ಶೊರೊ ಜನರು ಭಯಭೀತರಾಗಬೇಡಿ. ಕೊಟ್ರಿಯಲ್ಲಿ ಮಿಲಿಟರಿ ವ್ಯಾಯಾಮದ ಸಮಯದಲ್ಲಿ ಗುಂಡು ಹಾರಿಸುವ ವಾಡಿಕೆಯಿದೆ. ಈ ಸಮಯದಲ್ಲಿ ಮಾರ್ಟರ್ ಟ್ರೇಸರ್ ರೌಂಡ್ ಉಡಾಯಿಸಲಾಗಿದೆ. ಗಾಬರಿಯಾಗುವ ಅಗತ್ಯವಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಪಾಕಿಸ್ತಾನವು ಭಾರತೀಯ ಬ್ರಹ್ಮೋಸ್ ಕ್ಷಿಪಣಿಗೆ ಪ್ರತ್ಯುತ್ತರವಾಗಿ ಈ ಕ್ಷಿಪಣಿಯನ್ನು ಪರೀಕ್ಷಿಸಿದೆ. ಆದರೆ ಪಾಕಿಸ್ತಾನದ ಕ್ಷಿಪಣಿ ತನ್ನ ಗುರಿಯನ್ನು ತಲುಪಲು ವಿಫಲವಾಗಿದೆ ಎಂದು ಪಾಕಿಸ್ತಾನ ಸುದ್ದಿ ವಾಹಿನಿಯೊಂದು ಟ್ವೀಟ್ ಮಾಡಿದೆ.