ಪ್ಯಾರಿಸ್/ಮಾಸ್ಕೋ: ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಇಂದಿಗೆ 28ನೇ ದಿನಕ್ಕೆ ಕಾಲಿಟ್ಟಿದೆ. ಸಾವು ನೋವು ಹೆಚ್ಚುತ್ತಲಿದೆ. ಜನರು ಉಕ್ರೇನ್ನಿಂದ ಸ್ಥಳಾಂತರಗೊಳ್ಳುತ್ತಲೇ ಇದ್ದಾರೆ. ರಷ್ಯಾ ತನ್ನ ಆಕ್ರಮಣ ಮುಂದುವರಿಸಿದ್ದು, ಉಕ್ರೇನಿಯನ್ ಪಡೆ ಪುಟಿನ್ ಸೇನೆಯನ್ನು ದಿಟ್ಟವಾಗೇ ಎದುರಿಸುತ್ತಿದೆ. ದಾಳಿಯ ನಡುವೆಯೂ ಮಾತುಕತೆಗಳು ನಡೆಯುತ್ತಿದ್ದು, ಅವು ವಿಫಲವಾಗುತ್ತಲೇ ಸಾಗಿವೆ.
ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಮಂಗಳವಾರ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರೊಂದಿಗೆ ಮಾತುಕತೆ ನಡೆಸಿದರು. ಉಕ್ರೇನ್ ಮೇಲಿನ ರಷ್ಯಾ ದಾಳಿ ವಿಚಾರವಾಗಿ ಚರ್ಚಿಸಿ, ಸಂಭಾವ್ಯ ಕದನ ವಿರಾಮದ ನಿಯಮಗಳ ಕುರಿತು ಮಾತುಕತೆ ನಡೆಸಿದರು.
ಇದನ್ನೂ ಓದಿ: ರಷ್ಯಾ ಸೇನೆ ಉಕ್ರೇನ್‌ನಲ್ಲಿ ಯುದ್ಧಾಪರಾಧ ಎಸಗುತ್ತಿದೆ: ಯುರೋಪಿಯನ್ ಒಕ್ಕೂಟ
ಆದರೆ, ಯುದ್ಧ ಸ್ಥಗಿತ ಸಂಬಂಧ ಯಾವುದೇ ಅಂತಿಮ ಒಪ್ಪಂದಕ್ಕೆ ಬರಲಿಲ್ಲ. ಮ್ಯಾಕ್ರನ್ ತಮ್ಮ ಪ್ರಯತ್ನಗಳನ್ನು ಮುಂದುವರಿಸುವ ಅಗತ್ಯವನ್ನು ಮನಗಂಡಿದ್ದಾರೆ ಮತ್ತು ಅವರು ಉಕ್ರೇನ್ ಬೆಂಬಲಕ್ಕೆ ನಿಂತಿದ್ದಾರೆ. ಪುಟಿನ್ ಮತ್ತು ಮ್ಯಾಕ್ರನ್, ರಷ್ಯಾ - ಉಕ್ರೇನಿಯನ್ ಸಮಾಲೋಚಕರ ನಡುವಿನ ಮಾತುಕತೆ ಸೇರಿದಂತೆ ಉಕ್ರೇನ್‌ನಲ್ಲಿನ ಪರಿಸ್ಥಿತಿಯ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡ ಕರೆಯನ್ನು ಕ್ರೆಮ್ಲಿನ್ ದೃಢಪಡಿಸಿದೆ.